Please…ನಂದೂ ಒಂದ facebook ಅಕೌಂಟ ಮಾಡ್ರಿ

ಒಂದ ನಾಲ್ಕೈದ ವರ್ಷ ಆತ ನನ್ನ ಹೆಂಡ್ತಿ ’ರ್ರೀ..ನಂದು ಒಂದ ಫೇಸಬುಕ್ ಅಕೌಂಟ ಓಪನ್ ಮಾಡಿ ಕೊಡ್ರಿ’ ಅಂತ ಗಂಟ ಬಿದ್ದಾಳ. ಅಲ್ಲಾ ಹಂಗ ಅಕಿ ವರ್ಷದಾಗ ಹತ್ತ ಸರತೆ ಅಂತಾಳ ಖರೆ ಆದರ ನಾ
’ಏ, ನಿಂಗೊತ್ತಿಲ್ಲಾ ಸುಮ್ಮನೀರ…ಅದ ಕೆಟ್ಟ ಚಟಾ, ಸುಳ್ಳ ಯಾಕ ಫೇಸಬುಕ್ಕಿನಾಗ ಸಿಕ್ಕೊಂಡ ಸಂಸಾರ ಹಾಳ ಮಾಡ್ಕೋತಿ’ ಅಂತ ಹೆದರಸಿಸಿ ಬಿಡ್ತಿದ್ದೆ, ಆದರ ಯಾವಾಗ ಅಕಿಗೆ ಸ್ಮಾರ್ಟ ಫೋನ ಕೊಡಸಿದ್ನಲಾ ಆವಾಗಿಂದ ಮತ್ತ ಶುರು ಮಾಡಿದ್ಲು. ಅದರಾಗ ನಾ ಅಕಿ ಬಗ್ಗೆ ಫೇಸಬುಕ್ಕಿನಾಗ ಬರದಾಗ ಬಂದಿದ್ದ ಕಮೆಂಟ್, ಲೈಕ್ಸ ನೋಡಿ
’ರ್ರಿ…ನಿಮಗ ನನ್ನ ಬಗ್ಗೆ ಬರದರ ಇಷ್ಟ ಬರ್ತಾವ, ಇನ್ನ ನಾ ನಿಮ್ಮ ಬಗ್ಗೆ ಬರದರ ಎಷ್ಟ ಬರಬಹುದು…ನಂದೊಂದ ಅಕೌಂಟ ಮಾಡ್ರಿ’ ಅಂತ ಮತ್ತ ಹಟಾ ಮಾಡ್ಲಿಕತ್ತಾಳ.
ಅಲ್ಲಾ ಹಂಗ ನಾ ಫೇಸಬುಕ್ಕಿನಾಗ ಸ್ವಲ್ಪ ಫೇಮಸ್ ಆದಮ್ಯಾಲೆ ಅಂತು ಅಕಿ ಮತ್ತಿಷ್ಟ ಗಂಟ ಬಿದ್ದಾಳ. ಹಂಗ ನಂಗ ಅಕಿ ಫೇಸಬುಕ್ಕಿನಾಗ ಬರೋದರಿಂದ ಪ್ರಾಬ್ಲೇಮ್ ಏನಿಲ್ಲಾ ಆದರ ನಿಮಗೊತ್ತಲಾ ನಾ ಏನ ಸುಡಗಾಡ ಬರದರು ಅಕಿ ಬಗ್ಗೆ ಬರಿತೇನಿ ಅಂತ ಹಿಂಗಾಗಿ ನಾ ಮುಂದ ಏನರ ಬರದಾಗ ಅಕಿಗೆ ಗೊತ್ತಾಗಿ ಅಕಿನೂ ನನ್ನ ಬಗ್ಗೆ ಬರಿಲಿಕತ್ತರ ಮುಂದ ನನ್ನ ಗತಿ? ಹಿಂಗಾಗಿ ಅಕಿನ್ನ ಫೇಸಬುಕ್ಕಿನಿಂದ ದೂರ ಇಟ್ಟೇನಿ ಇಷ್ಟ.
ಅದರಾಗ ಈಗ ಇಕಿ ಏನಿಲ್ಲದ ದಿನಕ್ಕ ಎಂಟ ತಾಸ ವಾಟ್ಸಪ್ ಒಳಗ ಇರ್ತಾಳ, ಇನ್ನ ಫೇಸಬುಕ್ ಒಂದ ಓಪನ ಆದರ ಮುಂದ ಕುಕ್ಕರ ಸೀಟಿನೂ ನಾನ ಹೊಡಸಬೇಕಾಗ್ತದ.
ಅಲ್ಲಾ ಇಕಿಗೆ ಫೇಸಬುಕ್ ಅಕೌಂಟ ಮಾಡಿ ಕೊಡೋದ ಬಿಡ್ರಿ. ಲಗ್ನ ಆದ ಹೊಸ್ತಾಗಿ ರೇಶನ್ ಕಾರ್ಡನಾಗ ಹೆಸರ ಹಾಕಸಲಿಕ್ಕೆ ಸಹಿತ ನಾ ಹತ್ತ ಸರತೆ ವಿಚಾರ ಮಾಡಿದ್ದೆ.
ಹಂಗ ನಮ್ಮವ್ವಗ ಯಾವಾಗ ಸೊಸಿ ಅಡ್ಡಿಯಿಲ್ಲಾ ಅತ್ತಿ ಮನ್ಯಾಗ ಸೆಟ್ಲ್ ಆದ್ಲು ಅಂತ ಅನಸ್ತ ಆವಾಗ ಅಕಿ
“ಪ್ರಶಾಂತ… ಪ್ರೇರಣಾಂದ ಒಂದ ಹೆಸರ ಹಾಕಸ್ತಿ ಏನ ನೋಡ ರೇಶನ್ ಕಾರ್ಡನಾಗ’ ಅಂತ ಅಂದ್ಲು. ಹಂಗ ಆವಾಗ ನಾವ ರೇಶನ್ನಾಗ ತರೋದ ಸಕ್ಕರಿ, ಎಣ್ಣಿ ಇಷ್ಟ. ಇನ್ನ ರೇಶನ್ ಅಕ್ಕಿ ಅನ್ನಾ ನನಗ ಸೇರಂಗಿಲ್ಲಾಂತ ತರತಿದ್ದಿಲ್ಲಾ, ನಮ್ಮವ್ವ ಅದನ್ನು ತಾ ಇಡ್ಲಿ, ಫಡ್,ದ್ವಾಸಿ ಮಾಡಲಿಕ್ಕೆರ ಬರತದ ಅಂತಿದ್ಲ ಖರೇ ಆದರ ನಾ ಎಲ್ಲಿದ ಬಿಡ ಅಂತ ಅದನ್ನ ಬ್ಯಾರೆಯವರಿಗೆ ಮಾರಿ ಬಿಡ್ತಿದ್ದೆ.
ನನ್ನ ಮದ್ವಿ ಆದ ಮ್ಯಾಲೆ ನಮ್ಮವ್ವ
“ನೋಡಿಲ್ಲೇ..ಮೊದ್ಲ ತುಟ್ಟಿ ಕಾಲ, ಹಂತಾದರಾಗ ಲಗ್ನಾ ಬ್ಯಾರೆ ಮಾಡ್ಕೊಂಡಿ, ನೀ ಬಿಡೋದ ಬಿಟ್ಟ ಮೊದ್ಲ ಅಕಿ ಹೆಸರ ರೇಶನ್ ಕಾರ್ಡನಾಗ ಹಾಕಸು, ಮ್ಯಾಲೆ ಆ ರೇಶನ್ ಅಕ್ಕಿ ತೊಗೊಂಡ ಬಾ…ನಿನ್ನ ಹೆಂಡ್ತಿನರ ಅದನ್ನ ಉಣ್ಣೋದ ರೂಡಿ ಮಾಡ್ಕೋಳಿ..ಅದರಾಗ ಪೌಷ್ಟಿಕ ಭಾಳ ಇರ್ತದ, ಪಾಪ ಬೆಳೆಯೋ ಹುಡಗಿ” ಅಂತ ಗಂಟ ಬಿದ್ಲು.
ಅಲ್ಲಾ ನಾವ ಇಷ್ಟ ದಿವಸ ಛಲೋ ಅಕ್ಕಿ ತಿಂದ ಈಗ ನನ್ನ ಹೆಂಡ್ತಿಗೆ ರೇಶನ್ ಅಕ್ಕಿ ತಂದ ಹಾಕಿದರ ಜನಾ ಏನ ಅನ್ಕೋತಾರ್ರಿ? ಅಲ್ಲಾ ಜನಾ ಬಿಡ್ರಿ ನನ್ನ ಹೆಂಡ್ತಿ ಏನ ಅನ್ಕೋಬಾರದ?
ಆಮ್ಯಾಲೆ ಮನಿಗೆ ಗ್ಯಾಸ ಕನೇಕ್ಷನ ಬಂದಾಗಿಂದ ನಾ ತಾಸ ಗಟ್ಟಲೇ ಪಾಳೇ ಹಚ್ಚಿ ಆ ರೇಶನ್ ಅಂಗಡಿ ಚಿಮಣಿ ಎಣ್ಣಿ ತರೋದ ಬಿಟ್ಟ ಬಿಟ್ಟಿದ್ದೆ ಆದರ ನಮ್ಮವ್ವಗ ನನ್ನ ಲಗ್ನ ಆದ ಮ್ಯಾಲೆ ಆ ಚಿಮಣಿ ಎಣ್ಣಿನರ ಯಾಕ ಬಿಡಬೇಕ ಅನಸ್ತ, ಅಕಿ
“ಏ, ನಿನ್ನ ಹೆಂಡ್ತಿ ಹೆಸರ ರೇಶನ್ ಕಾರ್ಡನಾಗ ಹಾಕಸಿದರ ಎರಡ ಲಿಟರ್ ಚಿಮಣಿ ಎಣ್ಣಿನೂ ಜಾಸ್ತಿ ಕೋಡ್ತಾರ..ಯಾಕ ಬಿಡ್ತಿ” ಅಂತ ಗಂಟ ಬಿದ್ಲು.
“ಏ, ಮನ್ಯಾಗ ಗ್ಯಾಸ ಇದ್ದಾಗ ಮತ್ತ ಯಾಕ ನಿಂಗ ಚಿಮಣಿ ಎಣ್ಣಿ” ಅಂದರ
“ಅಯ್ಯ ಖೋಡಿ… ನಿಂಗೇನ ಗೊತ್ತಾಗತದ ಚಿಮಣಿ ಎಣ್ಣಿ ಮಹತ್ವ, ಯಾವಾಗ ಬೇಕಾಗ್ತದ ಗೊತ್ತಾಗಂಗಿಲ್ಲಾ, ಏನರ ಆಗಲಿ ಮನ್ಯಾಗ ಒಂದ ಡಬ್ಬಿ ಚಿಮಣಿ ಎಣ್ಣಿ ಇರಲಿ” ಅಂತ ಜೋರ ಮಾಡ್ತಿದ್ಲು.
ಪಾಪ ನನ್ನ ಹೆಂಡ್ತಿ ನಮ್ಮಿಬ್ಬರದ ಡಿಸ್ಕಶನ್ ಕೇಳಿ ಗಾಬರಿ ಆದ್ಲು. ಒಂದ ಕಡೆ ರೇಶನ್ ಅಕ್ಕಿ ದೇಹಕ್ಕ ಪೌಷ್ಟಿಕ್, ಬೆಳಿಯೋ ಹುಡಗಿ ಅಂತಾರ. ಮ್ಯಾಲೆ ಮನ್ಯಾಗ ಒಂದ ಡಬ್ಬಿ ಚಿಮಣಿ ಎಣ್ಣಿ ಇರಲಿ ಯಾವಾಗ ಬೇಕಾಗ್ತದ ಹೇಳಲಿಕ್ಕೆ ಬರಂಗಿಲ್ಲಾ ಅಂತನೂ ಅಂತಾರ ಅಂತ ಹೆದರಿ
“ಅಲ್ಲರಿ..ನಿಮ್ಮವ್ವ ಈ ಸುಡಗಾಡ ಚಿಮಣಿ ಎಣ್ಣಿಗೆ ಯಾಕ ಗಂಟ ಬಿದ್ದಾರಿ?” ಅಂತ ಕೇಳೆ ಬಿಟ್ಟಳು.
ಅಲ್ಲಾ ಹಂಗ ಆವಾಗ ಇವಾಗ ಪೇಪರನಾಗ ಸುದ್ದಿ ಬರ್ತಿದ್ವಲಾ, ಗಂಡಾ ಅತ್ತಿ ಕೂಡಿ ಚಿಮಣಿ ಎಣ್ಣಿ ಹೆಂಡ್ತಿಗೆ ಸುರುವಿದ್ದರು….ಹಂಗ… ಹಿಂಗ… ಅಂತ, ಪಾಪ ಹಂತಾವೇಲ್ಲಾ ಸುದ್ದಿ ಓದಿ ಹೆದರಿದ್ಲ ಕಾಣ್ತದ, ನಾ ಅಕಿಗೆ ಸಮಾಧಾನ ಮಾಡಲಿಕ್ಕೆ
” ಏ,..ಹುಚ್ಚಿ ನೀ ಇಷ್ಟ್ಯಾಕ ಹೆದರಿ…..ಚಿಮಣಿ ಎಣ್ಣಿ ಯೂಜ್ ಮಾಡೋದೇಲ್ಲಾ out dated method, ಈಗ ಭಾಳ new method ಬಂದಾವ ತೊಗೊ” ಅಂತ ನಾ ಮತ್ತಿಷ್ಟ ಹೆದರಸಿಸಿದೆ.
ಕಡಿಕೆ ಅಕಿ ತಲಿ ಕೆಟ್ಟ ನಮ್ಮವ್ವ ಏಷ್ಟ ಬಡಕೊಂಡರೂ ತನ್ನ ಹೆಸರೇನ ರೇಷನ್ ಕಾರ್ಡಿನಾಗ ಹಾಕಿಸಿ ಕೊಡ್ಲಿಲ್ಲಾ, ಅಲ್ಲಾ ಹಂಗ ಅಕಿ ಹೆಸರ ರೇಶನ್ ಕಾರ್ಡಿನಾಗ ಇಲ್ಲಾ ಅಂದರ ನಮಗೇನ ಚಿಮಣಿ ಎಣ್ಣಿ ಸಿಗಂಗಿಲ್ಲಾಂತ ತಿಳ್ಕೊಂಡಿದ್ಲ ಕಾಣ್ತದ. ಒಟ್ಟ ರೇಶನ್ ಕಾರ್ಡಿನಾಗ ಹೆಸರ ಅಂತೂ ಹಾಕಿಸಿ ಕೊಡಲಿಲ್ಲಾ. ಅಷ್ಟರಾಗ apl, bpl ಅಂತ ಕಾರ್ಡ ಶುರು ಆದ್ವು, ನಾ ಮುಂದ ರೇಶನ ಕಾರ್ಡ ಅಂದರ ಬರೇ ಅಡ್ರೇಸ್ ಫ್ರೂಫಿಗೆ ಇಷ್ಟ ಅಂತ ಸುಮ್ಮನಾದೆ.
ಮುಂದ voters id ಶುರು ಆದ್ವು, ಮನ್ಯಾಗಿನವರದೇಲ್ಲಾ ವೋಟರ್ಸ್ ಐ.ಡಿ. ಮಾಡ್ಸಿದ್ವಿ. ಆವಾಗೂ ಅಕಿಗೆ
“ಅಲ್ಲಾ ನಿಂದ ವೋಟರ್ಸ್ id ನಮ್ಮ ಮನಿ ಅಡ್ರೇಸಗೆ ಮಾಡ್ಸೋಣೊ ಬ್ಯಾಡೋ? ನೀ ಏನಿಲ್ಲದ ತಿಂಗಳದಾಗ ಎರಡ ವಾರ ತವರ ಮನ್ಯಾಗ ಇರತಿ” ಅಂತ ಕೇಳಿ ಮಾಡ್ಸಿಸಿದ್ದೆ.
ಮುಂದ ಆಧಾರ ಕಾರ್ಡ ಬಂತ, ಅದನ್ನ ನಮ್ಮ ಮನಿಗೆ ನಾ ಒಬ್ಬನ ಆಧಾರ ಅಂತ ನಂದ ಒಬ್ಬೊಂದ ಮಾಡ್ಸಿದ್ದೆ ಆದರ ಮುಂದ ಯಾವಾಗ ಇಕಿ ಎರಡ ಹಡದ ಸಂಸಾರದ ಭಾರ ಹೊರಲಿಕತ್ಲು ಆವಾಗ ಇಕಿನೂ ಆಧಾರ ಅಂತ ಇಕಿದು ಮಾಡಸಬೇಕಾತ.
ಈಗ ನೀವ ವಿಚಾರ ಮಾಡ್ರಿ, ಹಿಂಗ ವೋಟರ್ಸ್ id ,ಆಧಾರ ಕಾರ್ಡ,ರೇಶನ್ ಕಾರ್ಡಿನಾಗ ಹೆಂಡ್ತಿ ಹೆಸರ ಹಾಕಸಲಿಕ್ಕೆ ಹತ್ತ ಸರತೆ ವಿಚಾರ ಮಾಡಿದಂವಾ ನಾ ಇನ್ನ ಇಕಿನ್ನ ಫೇಸಬುಕ್ಕಿನಾಗ ಅಷ್ಟ ಸರಳ ಬಿಡ್ತೇನಿ? ಅಲ್ಲಾ ಹಂಗ ಇಕಿ ಫೇಸಬುಕ್ಕಿನಾಗ ಬಂದರ ನನ್ನ ಹಣೇಬರಹ ಮುಗದಂಗ. ಹಂಗ ನಂಗ ಫೇಸಬುಕ್ಕಿನಾಗ ಆಗಲಾರದವರೇಲ್ಲಾ ಸೇರಿ ನನ್ನ ಹೆಂಡ್ತಿ ತಲಿ ತಿಂದ ಎಲ್ಲೇ ನಮ್ಮಿಬ್ಬರನೂ ಒಬ್ಬರಿಗೊಬ್ಬರಿಗೆ ಬ್ಲಾಕ್ ಮಾಡೋಂಗ ಮಾಡ್ತಾರೋ ಅಂತ ನಂಗ ಹೆದರಕಿ ಬ್ಯಾರೆ. ನಾ ಅಂತೂ ಅಗದಿ ಕ್ಲೀಯರ ಇದ್ದೇನಿ, ಸೋಸಿಯಲ್ ಮೀಡಿಯಾದಾಗ ಒಂದ ನಾನರ ಇರಬೇಕು ಇಲ್ಲಾ ಅಕಿನರ ಇರಬೇಕು..ಹಿಂಗಾಗಿ ಸೋಸಿಯಲ್ ಮೀಡಿಯಾ ನಾ ನೋಡ್ಕೋತೇನಿ…ಸಂಸಾರ ನೀ ನೋಡ್ಕೊ ಅಂತ ಹೇಳಿ ಬಿಟ್ಟೇನಿ.
ಹಂಗ ಅಕಿ ಎಂದ ಫೇಸಬುಕ್ಕಿನಾಗ ಅಕೌಂಟ್ ಒಪನ್ ಮಾಡ್ತಾಳ ಅಂದ ನಾ ಫೇಸಬುಕ್ ಬಿಟ್ಟ ಬಿಡ್ತೇನಿ ಮತ್ತ. ಯಾಕಂದರ ನಾವಿಬ್ಬರೂ ಸೇರಿದರ ಫೇಸಬುಕ್ಕ ಅನ್ನೋದ ನಮ್ಮ ಮನಿ ಸಂಸಾರ ಆದಂಗ ಆಗಿ ಫೇಸಬುಕ್ಕಿನಾಗೂ ಜಗಳಾಡ್ಕೋತ ಕೂಡೋದ ಆಗ್ತದ, ಮ್ಯಾಲೆ ಅದಕ್ಕ ಲೈಕ ಮಾಡಲಿಕ್ಕೆ ಕಮೆಂಟ್ ಮಾಡಲಿಕ್ಕೆ ನಿಮ್ಮಂತಾ ಜನಾ ಬ್ಯಾರೆ ಇರ್ತಾರ ಹಿಂಗಾಗಿ ಅಕಿ ಏನರ
” ನಂದೂ ಒಂದ ಫೇಸಬುಕ್ಕಿನಾಗ ಅಕೌಂಟ ಮಾಡ್ರಿ’ ಅಂದರ
’ನಿಂಗ ನಾ ಬೇಕೋ ಇಲ್ಲಾ ಫೇಸಬುಕ್ ಬೇಕೋ’ ಅಂತ ಕೇಳೋ ವಿಚಾರ ಮಾಡೇನಿ. ಹಂಗ ನೀವ ಏನರ ಅಪ್ಪಿ ತಪ್ಪಿ ಫೇಸಬುಕ್ಕಿನಾಗ ’ಪ್ರೇರಣಾ ಆಡೂರ’ ಅಂತ ಕಂಡರ ಹೇಳ್ರಿ ಮತ್ತ.
ಅಲ್ಲಾ ಅನ್ನಂಗ ನಿನ್ನಿಗೆ ( feb 8thಕ್ಕ) ಫೇಸಬುಕ್ಕಿಗೆ ಹದಿನೈದ ತುಂಬಿ ಹದಿನಾರರಾಗ ಬಿದ್ವು. ಹಂಗ ಈ ಸುಡಗಾಡ ಫೇಸಬುಕ್ ಇದ್ದಿದ್ದಿಲ್ಲಾ ಅಂದರ ನಾವೇಷ್ಟೋ ಮಂದಿ ಒಬ್ಬರಿಗೊಬ್ಬರ ಭೇಟ್ಟಿನ ಆಗ್ತಿದ್ದಿಲ್ಲಾ ಖರೆ ಆದರ ಎಷ್ಟೋ ಸಂಸಾರ ಫೇಸಬುಕ್ ಇಲ್ಲದ ಇನ್ನೂ ಸಂತೋಷದಿಂದ ಇರ್ತಿದ್ದವು ಅಂತ ನಂಗ ಅನಸ್ತದ. ನೀವ ಏನಂತರಿ?

One thought on “Please…ನಂದೂ ಒಂದ facebook ಅಕೌಂಟ ಮಾಡ್ರಿ

Leave a Reply

Your email address will not be published.

This site uses Akismet to reduce spam. Learn how your comment data is processed.

About Me

ಹುಟ್ಟಿದ್ದು 1973, ಅಕ್ಟೋಬರ 13ಕ್ಕ. ಹೆಸರಿಗೆ ಹುಟ್ಟಿದ್ದ ಶಿವಮೊಗ್ಗಾ ಆದರು, ಬೆಳದಿದ್ದು-ಬಲತಿದ್ದು-ಕಲತಿದ್ದು- ಕಳತಿದ್ದು (ಪಕ್ವವಾಗಿದ್ದು) ಎಲ್ಲಾ ಹುಬ್ಬಳ್ಳಿ ಒಳಗ, ಕಲತಿದ್ದು ಬಿ.ಏಸ್ಸಿ, ಕೋತಂಬರಿ ಕಾಲೇಜ ಹುಬ್ಬಳ್ಳಿ ಒಳಗ ಮುಂದ ಎಮ್.ಬಿ.ಎ (ಸಿಂಬಾಯ್ಸಿಸ್- ಪೂಣೆ). ಸದ್ಯೇಕ...

Follow me on Facebook

ನನ್ನ ಸಂಪೂರ್ಣ ಪ್ರೊಫೈಲ್ ವೀಕ್ಷಿಸಿ