ನಮ್ಮ ಮನೆಯವರನ ಮಾತೃಭೋಜನಕ್ಕ ಕೂಡಸ್ರಿ

ಮೊನ್ನೆ ಒಂದ ಮುಂಜವಿಗೆ ಹೋಗಿದ್ದೆ, ಅಗದಿ ಹತ್ತರದವರದ, ಮ್ಯಾಲೆ ಅವರ ಮನಿ ಅಕ್ಕಿ ಕಾಳಿಗೆ ಬಂದವರಿಗೆ ಇಷ್ಟ ರಿಟರ್ನ್ ಗಿಫ್ಟ ಅಂತ ಹೇಳಿದ್ದಕ್ಕ ಲಗೂನ ಹೋಗಿದ್ದೆ. ಮುಂಜವಿ ಮಠದಾಗ ಇಟಗೊಂಡಿದ್ದರು. ನಂಗ ಮಠಕ್ಕ ಯಾವದರ ಕಾರ್ಯಕ್ರಮಕ್ಕ ಹೋಗೊದ ಅಂದರ ಮೈಮ್ಯಾಲೆ ಬರತದ. ಯಾಕಂದರ ಅಲ್ಲೇ ಊಟಕ್ಕ ಪ್ಯಾಂಟ – ಅಂಗಿ ನಡೆಯಂಗಿಲ್ಲಾ. ಯಾರ ಇದ್ದರೂ ಪ್ಯಾಂಟ, ಅಂಗಿ, ಬನಿಯನ್ ತಗದ ಧೋತ್ರದ ಮ್ಯಾಲೆ ಊಟಾ ಮಾಡೋದ ಪದ್ದತಿ. ಮ್ಯಾಲೆ ಊಟಾ ಅಗದಿ ಪದ್ದತ ಸೀರ ಕೆಳಗ ಕೂತ ಮಾಡಬೇಕ.
ಇನ್ನ ಅಕ್ಕಿಕಾಳಿಗೆ ಅಗದಿ ರೆಡಿ ಆಗಿ ಸಫಾರಿ-ಗಿಫಾರಿ ಹಾಕ್ಕೊಂಡ ಹೋಗಿ ಮತ್ತ ಊಟದ ಹೊತ್ತಿಗೆ ಎಲ್ಲಾ ಕಳದ ಲುಂಗಿ ಇಲ್ಲಾ ದೋತ್ರಾ ಉಟಗೋಳೊದ ಅಂದರ ವಜ್ಜಾ ಆಗ್ತದ. ಅಲ್ಲಾ ಹಂಗ ಹೆಣಮಕ್ಕಳ ನೀವು ಎಲ್ಲೇ ಫಂಕ್ಶನ ಇಡ್ರಿ ಅವರ pre- ಅಕ್ಕಿಕಾಳ, for- ಅಕ್ಕಿಕಾಳ and post- ಅಕ್ಕಿಕಾಳ ಅಂತ ಎರೆಡ-ಮೂರ ಸೀರಿ ಚೇಂಜ್ ಮಾಡೆ ಮಾಡ್ತಾರ. ಕಡಿಕೆ ಸಪರೇಟ್ ರೂಮ್ ಸಿಗಲಿಲ್ಲಾ ಅಂದರೂ ಇಬ್ಬರ ಒಂಬತ್ತವಾರಿ ಸೀರಿ ಚೆಂಜ್ ಮಾಡೋರ ನಡಕ ನಾಲ್ಕ ಮಂದಿ ಆರವಾರಿಯವರ ಸೀರಿ ಚೆಂಜ್ ಮಾಡ್ತಾರ ಆ ಮಾತ ಬ್ಯಾರೆ. ಇನ್ನ ಅವರ ಸೀರಿಗೆ ಸೀರಿನ ಚೆಂಜ್ ಮಾಡ್ತಾರ ಅಂದರ ನಮಗ ಪ್ಯಾಂಟ ಶರ್ಟ ಬಿಚ್ಚಿ ಧೋತ್ರಾ ಉಟಗೊಳೋದ ಏನ ದೊಡ್ಡದ ಬಿಡ್ರಿ, ಆದರ ನಾ ಎಲ್ಲೇ ಹೋದಲ್ಲೆ ಬಂದಲ್ಲೇ ಪ್ಯಾಂಟ- ಅಂಗಿ ಬಿಚ್ಚೋದ ಅದರಾಗ ಮೊದ್ಲ ನಂದ six pack ribs ಎದ್ದ ಕಾಣೊ ಮೈ ಬ್ಯಾರೆ, ಮ್ಯಾಲೆ ಕಚ್ಚಿ ಹಾಕ್ಕೊಂಡ ಧೋತ್ರಾ ಉಟಗೊಳ್ಳಿಕ್ಕೂ ಬರಂಗಿಲ್ಲಾ ಅಂತ ನಾ ಸೀದಾ ಧೋತ್ರಾ ಮನಿಯಿಂದನ ಉಟಗೊಂಡ ಹೋಗಿದ್ದೆ.
ನಾ ಹೋಗೊದಕ್ಕ ಮಾತೃಭೋಜನ ಸ್ಟಾರ್ಟ ಆಗೋದ ಇತ್ತ. ಅವರ ಒಂದ ಐದ ಮಂದಿ ವಟುಗಳಿಗೆ ಹೇಳಿದ್ದರಂತ ಅದರಾಗ ಒಬ್ಬೊಂವ ಇನ್ನೂ ಬಂದಿದ್ದಿಲ್ಲಾ ಹಿಂಗಾಗಿ ಅವನ ಸಂಬಂಧ ಕಾಯಲಿಕತ್ತಿದ್ದರು. ಹಂಗ ಇತ್ತೀಚಿಗೆ ಮಾತೃಭೋಜನಕ್ಕ ಕೂಡಸಲಿಕ್ಕೆ ಒಂದ ಐದ ಮಂದಿ ವಟುಗಳ ಸಹಿತ ಸಿಗಂಗಿಲ್ಲಾ. ಸಿಕ್ಕರೂ ಈಗಿನ ಹುಡುಗರು ಮಡಿ ಉಟಗೊಂಡ ಕೂಡ ಅಂದರ ನಾ ಒಲ್ಲೆ ನೀ ಒಲ್ಲೇ ಅಂತಾವ. ಹಿಂಗಾಗಿ ಅವರ ಸಣ್ಣೊರ ದೊಡ್ಡೊರ ಅಂತ ನೋಡಲಾರದ ಒಟ್ಟ ಲಗ್ನ ಆಗಲಾರದ ಐದ ಮಂದಿ ವಟುಗಳಿಗೆ ಹೇಳಿದ್ದರು. ಅಲ್ಲಾ, ಆಮ್ಯಾಲೆ ಗೊತ್ತಾತ ಅವರ ಆ ವಧು-ವರರ ಕೇಂದ್ರದಿಂದ ಲಗ್ನ ಆಗಲಾರದ ಐದ ವರಗೊಳ ಕಂಟ್ಯಾಕ್ಟ ನಂಬರ್ ತೊಗೊಂಡ ’ಮಾತೃ ಭೋಜನ’ಕ್ಕ ಕರದಿದ್ದರು.
ನಾ ಹಿಂಗ ಅಗದಿ ಬಿಳೆ ಧೋತ್ರಾ ಉಟಗೊಂಡ ಸ್ಟೈಲಾಗಿ ಹೋಗೊದಕ್ಕ ಪಾಪ ಆಚಾರ್ಯರ
’ಹಾಂ, ಐದನೇ ವಟು ಬಂದರು…ಲಗು ಲಗೂನ ಎಲಿಗೆ ಬಡಸರಿ’ ಅಂತ ಅಂದ ಬಿಟ್ಟರು.
ಅಲ್ಲಾ ಲಗ್ನಾಗಿ ಇಪ್ಪತ್ತೊಂದ ವರ್ಷಾತ ಇನ್ನೂ ನನಗ ಇಪ್ಪತ್ತೊಂದ ವರ್ಷದ ವಟು ಅಂತ ಕನ್ಸಿಡರ್ ಮಾಡಿದರಲಾ ಅಂತ ಖುಷಿ ಆತ ಖರೇ ಆದರ ನನ್ನ ಮಗನವಾರಗಿ ಹುಡಗರ ಜೊತಿ ನಾ ಹೆಂಗ ಮಾತೃ ಭೋಜನಕ್ಕ ಕೂಡಬೇಕ?ಅಷ್ಟರಾಗ ನನ್ನ ಹೆಂಡ್ತಿ
“ರ್ರಿ…ಅವರ ನಮ್ಮ ಮನೆಯವರ್ರಿ…..ಅವರಿಗೆ ಹೆಂಗ ಮಾತೃ ಭೋಜನಕ್ಕ ಕೂಡಸ್ತೀರಿ” ಅಂತ ಓದರಿದ್ಲು.
ಮತ್ತ ಪಾಪ ಆಚಾರ್ಯರ
’ಏ ಸ್ವಾರಿ….ನಂಗ ಯಾರೋ ದೊಡ್ಡೊರ ಒಬ್ಬರ ವಟು ಬರೋರ ಇದ್ದಾರ ಅಂತ ಅಂದಿದ್ದರು ಅದಕ್ಕ ಇವರ ಇರಬೇಕ ಅಂತ ತಿಳ್ಕೊಂಡಿದ್ದೆ’ ಅಂತ ಅಂದರು.
ಅಲ್ಲಾ ಹಂಗ ನಮ್ಮಲ್ಲೇ ೩೫-೩೭ ವರ್ಷ ತನಕ ಮದ್ವಿ ಆಗಲಾರದವರ ಇದ್ದಾರ. ಅವರೇಲ್ಲಾ ವಟುಗಳ ಮತ್ತ. ಅವರಿಗೆ ಮಾತೃಭೋಜನಕ್ಕ ಕೂಡಲಿಕ್ಕೆ ಅಧಿಕಾರ ಅದ. ಹಂಗ ಆಚಾರ್ಯರು ನನ್ನ ಪರ್ಸನಾಲಿಟಿ ನೋಡಿ ನಂದೂ ಇನ್ನೂ ಮದ್ವಿ ಆಗಿರಲಿಕ್ಕಿಲ್ಲಾ, ನಾನೂ ಒಂದ ಎಲಿಜಿಬಲ್ ವಟು ಅಂತ ತಿಳ್ಕೊಂಡಿದ್ದರ ಬಿಡ್ರಿ, ಪಾಪ ಅದರಾಗ ಅವರದೇನ ತಪ್ಪ ಇದ್ದಿದ್ದಿಲ್ಲಾ.
ಹಂಗ ನನ್ನ ಹೆಂಡ್ತಿ ಆಚಾರ್ಯರ ’ಐದನೇ ವಟು ಬಂದರು’ ಅಂದಾಗ ಸಟಕ್ಕನ ’ಏ..ಅವರ ನಮ್ಮ ಮನಿಯವರ್ರಿ’ ಅಂತ ಒದರಿದ್ದಕ್ಕ ಕಾರಣ ಇತ್ತ.
ಅದರದ ಒಂದ ಚೂರ ಕಥಿ ಕೇಳ್ರಿಲ್ಲೆ.
ನನ್ನ ಲಗ್ನಾಗಿ ಒಂದ ಎಂಟ ತಿಂಗಳಾಗಿತ್ತ, ನನ್ನ ಹೆಂಡ್ತಿ ಮೌಶಿ ಮಗಾ ಪುಟ್ಟುಂದ ಮುಂಜವಿ ಇತ್ತ. ಇನ್ನ ಅವರ ಪೈಕಿ ಯಾರದ ಲಗ್ನಾ ಮುಂಜವಿ ಆದರೂ ನನ್ನ ಹೆಂಡ್ತಿನ ಯಾವಾಗಲೂ ಕಳಸಗಿತ್ತಿ. ಹಿಂಗಾಗಿ ಈ ಮುಂಜವಿಗೂ ಅಕಿನ ಕಳಸಗಿತ್ತಿ ಆಗಿದ್ಲು. ಇನ್ನ ನಂದೂ ಅಕಿ ಜೊತಿ ಹೊಸ್ದಾಗಿ ಲಗ್ನ ಆಗಿತ್ತು ಹಿಂಗಾಗಿ ಎಲ್ಲಾ ಫಂಕ್ಶನದಾಗೂ ಅಕಿ ಹಿಂದ ಬಾಲಂಗಸಿಗತೆ ಅಕಿ ಸೀರಿ ಫಾಲ್ಸ್ ಹಿಡ್ಕೊಂಡ ಅಡ್ಡಾಡತಿದ್ದೆ. ಅದರಾಗ ಇದ ಅತ್ತಿ ಮನೆ ಕಡೆದ, ಮ್ಯಾಲೆ ಕಳಸಗಿತ್ತಿ ಗಂಡ ಬ್ಯಾರೆ.
ಅವತ್ತು ಮಾತೃಭೋಜನ ಟೈಮ ಒಳಗ ಒಂದಿಬ್ಬರ ವಟುಗಳ ಬಂದಿದ್ದಿಲ್ಲಾ, ಭಟ್ಟರು ದಾರಿ ಕಾಯಲಿಕತ್ತಿದ್ದರು. ನನ್ನ ಹೆಂಡ್ತಿ ಆವಾಗ ಸುಮ್ಮನ ಕೂಡಬೇಕೋ ಬ್ಯಾಡ ಭಡಾ ಭಡಾ ಭಟ್ಟರಿಗೆ
’ನಮ್ಮ ಮನೆಯರನ ಮಾತೃ ಭೋಜನಕ್ಕ ಕೂಡಸ್ರಿ’ ಅಂದ್ಲು.
“ಏ, ನಿಮ್ಮ ಮನೆಯವರನ ಹೆಂಗ ಮಾತೃ ಭೋಜನಕ್ಕ ಕೂಡಲಿಕ್ಕೆ ಬರತದ’ ಅಂತ ಭಟ್ಟರ ಅಂದರ
’ಏ, ಅವರದ ಮುಂಜವಿ ಆಗೇದ ತೊಗೊಳ್ರಿ’ ಅಂತ ಇಕಿ ಅಂದ್ಲು.
ಭಟ್ಟರ ತಲಿಕೆಟ್ಟ
’ಏ, ನಮ್ಮವ್ವಾ ನಿನ್ನ ಗಂಡಂದ ಮುಂಜವಿ, ಸೋಡ ಮುಂಜವಿ ಇಷ್ಟ ಏನ ಲಗ್ನಾ, ಪ್ರಸ್ಥಾ ಎಲ್ಲಾ ಆಗ್ಯಾವ, ಹಂಗ ಒಮ್ಮೆ ಲಗ್ನ ಆದ ಮ್ಯಾಲೆ ಅಂವಾ ವಟು ಆಗಿ ಉಳಿಯಂಗಿಲ್ಲಾ, ನೀ ಏನ ನೂರ ರೂಪಾಯಿ ದಕ್ಷೀಣಿ, ಬಾಳಿ ಎಲಿ ಮ್ಯಾಲೆ ಫರಾಳದ್ದ ಸಂಬಂದ ಗಂಡನ್ನ ವಟು ಮಾಡಿ ಮಾತೃಭೋಜನಕ್ಕ ಕೂಡಸೋ ಪೈಕಿ’ ಅಂತ ಎಲ್ಲಾರ ಮುಂದ ಅಸಂಯ್ಯ ಮಾಡಿದ್ದರು. ಅವತ್ತಿನಿಂದ ಅಕಿಗೆ ಲಗ್ನಾದೋರ ಮಾತೃಭೋಜನಕ್ಕ ಕೂಡಲಿಕ್ಕೆ ಬರಂಗಿಲ್ಲಾ ಅಂತ ಗೊತ್ತಾಗಿದ್ದ.
ನಾ ಆಮ್ಯಾಲೆ ನನ್ನ ಹೆಂಡ್ತಿಗೆ
’ನೋಡಿಲ್ಲೇ…ವಟು ಅಂದರ ಲಗ್ನಾ ಆಗಲಾರದವರು, ಮತ್ತೊಬ್ಬರ ಎಲಿ ಒಳಗ ಊಟಾ ಮಾಡಲಾರದ, ಎಂಜಲಾ ತಿನ್ನಲಾರದ ಬ್ರಹ್ಮಚಾರ್ಯ ಫಾಲೋ ಮಾಡೋರು. ಇನ್ನ ಮಾತೃಭೋಜನ ಅಂದರ ಮುಂಜವಿ ಮಣಿ ಅವತ್ತ ಲಾಸ್ಟ ಅವರವ್ವನ ಎಲಿ ಒಳಗ, ಅವ್ವನ ತೊಡಿ ಮ್ಯಾಲೆ ಕೂತ ಊಟಾ ಮಾಡೋದ ಮುಂದ ಲಗ್ನ ಆಗೋತನಕ ಅಂವಾ ಅವರಿವರ ಎಲಿ ಒಳಗ ಕೈ ಹಾಕಂಗಿಲ್ಲಾ, ಮಡಿ-ಮೈಲಗಿ, ಎಂಜಲಾ-ಮುಸರಿ ಎಲ್ಲಾ ಪಾಲಸಬೇಕು’ ಅಂತ ತಿಳಿಸಿ ಹೇಳಿದೆ.
ನಾ ಹಂಗ ಸೂಕ್ಷ್ಮ ಹೇಳಿದ ಮ್ಯಾಲೆ ಅಕಿಗೆ ಗೊತ್ತಾತ, ಲಗ್ನ ಆದವರ ಇವನ್ನ ಯಾವುದು ಫಾಲೊ ಮಾಡಂಗಿಲ್ಲಾ, ಗಂಡಾ- ಹೆಂಡ್ತಿ ಒಂದರಾಗ ಊಟಾ ಮಾಡ್ತಾರ, ಅವಕ್ಕ ಎಂಜಲಾ, ಮುಸರಿ ಅನ್ನೊ ಖಬರ ಇರಂಗಿಲ್ಲಾ, ಎಲ್ಲಾ ಫ್ರೆಂಚ್ ಟೈಪ್ ಹಿಂಗಾಗಿ ಗಂಡಾ ಲಗ್ನ ಆದಮ್ಯಾಲೆ ಮಾತೃಭೋಜನಕ್ಕ ಕೂಡಲಿಕ್ಕೆ ಅನರ್ಹ ಅಂತ.
ಅಲ್ಲಾ, ಹಂಗ ಇದ ಗಂಡಸರಿಗೆ ಅನ್ಯಾಯ ಬಿಡ್ರಿ ಹೆಣ್ಣಮಕ್ಕಳ ಮಾತ್ರ ಲಗ್ನಾದರೂ ಕಳಸಗಿತ್ತಿ ಆಗಬಹುದು ಆದರ ಗಂಡಸರು ಲಗ್ನ ಆದ ಮ್ಯಾಲೆ ವಟು ಆಗಲಿಕ್ಕೆ ಬರಂಗಿಲ್ಲ.
ಆದರೂ ಏನ ಅನ್ನರಿ ಲಗ್ನ ಆದ ಹೊಸ್ದಾಗಿ ’ನಮ್ಮ ಮನೆಯವರನ ಮಾತೃಭೋಜನಕ್ಕ ಕೂಡಸ್ರಿ’ ಅಂತ ನನ್ನ ಹೆಂಡ್ತಿ ಅಂದಿದ್ದ ನೆನಸಿಗೊಂಡರ ಇವತ್ತಿಗೂ ನಗೂ ಬರ್ತದ.
ಅನ್ನಂಗ ಇನ್ನೊಂದ ಹೇಳೋದ ಮರತೆ ನಾಳೆ ‘ವಿಶ್ವ ನಗು ದಿವಸ’ world laughter day. ಪ್ರತಿ ವರ್ಷ ಮೇ ತಿಂಗಳ ಮೊದಲನೇ ರವಿವಾರ world laughter day.
ಈ ವಿಶ್ವ ನಗು ದಿವಸವನ್ನ ಸ್ಟಾರ್ಟ ಮಾಡಿದವರು ಭಾರತೀಯರು, ಜಗತ್ತಿಗೆ ನಗುವಿನ ಪ್ರಾಮುಖ್ಯತೆಯನ್ನ ಹೇಳಿ ಕೊಟ್ಟ ಇವತ್ತ ಜಗತ್ತೀನಾದ್ಯಾಂತ ಈ ‘ವಿಶ್ವ ನಗು ದಿವಸ’ ವನ್ನ ಆಚರಿಸೊ ಹಂಗ ಮಾಡಿದವರು ನಮ್ಮವರು.
“ನೀವು ನಕ್ಕಾಗ ಬದಲಾಗ್ತೀರಿ, ನೀವು ಬದಲಾದಾಗ ನಿಮ್ಮ ಇಡಿ ಜಗತ್ತ ಬದಲಾಗ್ತದ” ಅಂತ ಹೇಳಿ ಜೀವನದಾಗ ಆರೋಗ್ಯ, ಸಂತೋಷ ಹಾಗೂ ವಿಶ್ವ ಶಾಂತಿಗೆ laughter yogaನ ಮದ್ದು ಅಂತ ನಗುವ ಯೋಗಾಭ್ಯಾಸವನ್ನ ಹುಟ್ಟು ಹಾಕಿದವರ ಮುಂಬಯಿಯ ಡಾ. ಮದನ ಕಟಾರಿಯಾ ಅವರು.
ನಗೋರಿಗೆ ನೂರವರ್ಷ ಆಯುಷ್ಯ ಅಂತಾರ ಎಲ್ಲಾರೂ ನಕ್ಕೋತ ಇರೋಣ. One should not miss any opporunity in a life to laugh ಅಂತ ತಲ್ಯಾಗ ಇಟಗೊಂಡ ನಾವ ಗಿರಮಿಟ್ ಅಂಕಣ ಶುರು ಮಾಡಿದ್ದ.
ನನ್ನ ಇಡಿ ಅಂಕಣ ಓದಿ ನೀವು ಒಂದ ಚೂರ ನಕ್ಕರೂ ನಾ ಬರದಿದ್ದ ಸಾರ್ಥಕ.
ನಿಮಗೇಲ್ಲಾ ಈ ವಿಶ್ವ ನಗು ದಿವಸದ ಶುಭಾಷಯಗಳು.

One thought on “ನಮ್ಮ ಮನೆಯವರನ ಮಾತೃಭೋಜನಕ್ಕ ಕೂಡಸ್ರಿ

Leave a Reply

Your email address will not be published.

This site uses Akismet to reduce spam. Learn how your comment data is processed.

About Me

ಹುಟ್ಟಿದ್ದು 1973, ಅಕ್ಟೋಬರ 13ಕ್ಕ. ಹೆಸರಿಗೆ ಹುಟ್ಟಿದ್ದ ಶಿವಮೊಗ್ಗಾ ಆದರು, ಬೆಳದಿದ್ದು-ಬಲತಿದ್ದು-ಕಲತಿದ್ದು- ಕಳತಿದ್ದು (ಪಕ್ವವಾಗಿದ್ದು) ಎಲ್ಲಾ ಹುಬ್ಬಳ್ಳಿ ಒಳಗ, ಕಲತಿದ್ದು ಬಿ.ಏಸ್ಸಿ, ಕೋತಂಬರಿ ಕಾಲೇಜ ಹುಬ್ಬಳ್ಳಿ ಒಳಗ ಮುಂದ ಎಮ್.ಬಿ.ಎ (ಸಿಂಬಾಯ್ಸಿಸ್- ಪೂಣೆ). ಸದ್ಯೇಕ...

Follow me on Facebook

ನನ್ನ ಸಂಪೂರ್ಣ ಪ್ರೊಫೈಲ್ ವೀಕ್ಷಿಸಿ