ದೋಸ್ತ…ಅವರ ನೈಂಟಿ ಬ್ಯಾನ್ ಮಾಡಸಿದ್ದಕ್ಕ…ಇವರ ನೈಟಿ ಬ್ಯಾನ ಮಾಡ್ಯಾರ

ಈಗ ಒಂದ ಎರಡ ತಿಂಗಳ ಹಿಂದ ಪೇಪರನಾಗ ಒಂದ ಸುದ್ದಿ ಬಂದಿತ್ತ, ಸುದ್ದಿ ಏನಪಾ ಅಂದರ ಆಂಧ್ರ ಪ್ರದೇಶದ ಒಂದ ಹಳ್ಯಾಗ ಹೆಣ್ಣ ಮಕ್ಕಳ ಹಗಲ ಹೊತ್ತಿನಾಗ ’ನೈಟಿ’ ಹಾಕೊಳಂಗಿಲ್ಲಾಂತ ಗ್ರಾಮ ಪಂಚಾಯತಿಯವರು ಕಾನೂನ ಮಾಡ್ಯಾರ ಅಂತ. 6 am to 7 pm ನೈಟಿ ಬ್ಯಾನ್. ಹಂಗ ಯಾರರ ಅಪ್ಪಿ ತಪ್ಪಿ ಹಾಕ್ಕೊಂಡ ಹೊರಗ ಅಡ್ಡಾಡಿದರ 2,000 ರೂ. ದಂಡ, ಆಮ್ಯಾಲೆ ಹಿಂತಾಕಿ ಹಾಕ್ಕೊಂಡಿದ್ಲು ಅಂತ ಯಾರರ ಕಿಡ್ಡಿ ಮಾಡಿದರ ಅವರಿಗೆ 1000 ಬಹುಮಾನ ಬ್ಯಾರೆ. ಅಲ್ಲಾ ಎರಡನೂರಕ್ಕ ಜೋಡಿ ಹೊಸಾ ನೈಟಿನ ಸಿಗಬೇಕಾರ ಬರೇ ಒಂದ ಹಳೇ ನೈಟಿ ಹಾಕ್ಕೊಂಡರ ಎರಡ ಸಾವಿರ ದಂಡ ಅಂದರ ತಪ್ಪ ಬಿಡ್ರಿ. ಇನ್ನ ಮಂದಿ ಹಾಕ್ಕೊಂಡಿದ್ದನ್ನ ಹೇಳಿದವರಿಗೆ ಒಂದ ಸಾವಿರ ರೂಪಾಯಿ ಬಹುಮಾನ ಅಂದರ ರೊಕ್ಕದ ಆಶಾಕ್ಕ ಇವನ ಹೆಂಡ್ತಿ ಹಾಕ್ಕೊಂಡಿದ್ಲು ಅಂತ ಅಂವಾ, ಅವನ ಹೆಂಡ್ತಿ ಹಾಕ್ಕೊಂಡಿದ್ಲು ಅಂತ ಇಂವಾ ಹೇಳೆ ಹೇಳ್ತಾನ ಆ ಮಾತ ಬ್ಯಾರೆ.
ಹಂಗ ನಂಗ ಇದನ್ನ ಓದಿ ಭಾರಿ ವಿಚಿತ್ರ ಅನಸ್ತ, ಅಲ್ಲಾ ಪಾಪ ನೈಟಿ ಏನ ಹಂತಾ ಪಾಪ ಮಾಡೇದ ಅಂತೇನಿ. ಹಂಗ ನಾ ಈ ನೈಟಿದ ಭಾರಿ ದೊಡ್ಡ ಫ್ಯಾನ, ಮನ್ಯಾಗಿನ ಹೆಣ್ಣಮಕ್ಕಳಿಗೆ ವರ್ಷಕ್ಕ ಎರಡ ನೈಟಿ ಕೊಡಸಿ ಬಿಟ್ಟರ ಮುಗದ ಹೋತ ಅವರ ಖುಷ್ ಇರ್ತಾರ. ಅಲ್ಲಾ ಅವರ ಅರ್ಧಾ ಸಂಸಾರ ಕಳೆಯೋದ ನೈಟಿ ಒಳಗ ಇನ್ನ ಹಂತಾದ ನೈಟಿನ ಬ್ಯಾನ ಮಾಡಿದರ ಹೆಂಗ ಅಂತೇನಿ.
ನಾ ಅಂತೂ ಈ ನೈಟಿ ಕಂಡ ಹಿಡದಂವಂಗ ನೋಬೆಲ್ ಬಹುಮಾನ ಕೊಡಬೇಕು ಅಂತ ಒಂದ ದೊಡ್ಡ ಲೇಖನಾನ ಬರದಂವಾ, ಇಲ್ಲೆ ನೋಡಿದರ ನೈಟಿ ಹಾಕ್ಕೊಂಡರ ದಂಡಾ ಹಾಕ್ತಾರ ಅಂದರ ಆಶ್ಚರ್ಯ ಆತ.
ಹಂಗ ಎಲ್ಲಾ ಬಿಟ್ಟ ಆ ಗ್ರಾಮ ಪಂಚಾಯತಿಯವರಿಗೆ ಹಿಂತಾ ನೋಬೆಲ್ ನೈಟಿ ಮ್ಯಾಲೆ ಯಾಕ ಕಣ್ಣ ಬಿದ್ದ ಹಿಂತಾ ಡಿಸಿಜನ್ ತೊಗಂಡರು ಅಂತ ಅಂದರ ಅವರಿಗೆ ಈ ಹೆಣ್ಣಮಕ್ಕಳನ್ನ ಹಗಲಿಲ್ಲಾ ರಾತ್ರಿಲ್ಲ ನೈಟಿ ಮ್ಯಾಲೆ ನೋಡಿ ನೋಡಿ ಬೇಜಾರ ಆಗಿ ಬಿಟ್ಟಿತ್ತಂತ, ಅದಕ್ಕ ಒಂದ ನಾಲ್ಕ ಮಂದಿ ಗಂಡಸರ ಸೇರಿ ಮೀಟಿಂಗ ಮಾಡಿ ’ ನೈಟಿ ಬ್ಯಾನ್’ ಅಂತ ಡಿಸೈಡ ಮಾಡಿ ಬಿಟ್ಟಿದ್ದರು. ಅವರಿಗೆ ಮನ್ಯಾಗ ನೈಟಿ, ಅಂಗಡಿಗೆ ಹೊಂಟರ ನೈಟಿ, ಮಕ್ಕಳನ್ನ ಸಾಲಿ ಬಿಡಲಿಕ್ಕೆ ಹೋಗಬೇಕಾರ ನೈಟಿ, ಆ ಮಹಿಳಾ ಮಂಡಳದ್ದ ಮೀಟಿಂಗಗೆ ಸಹಿತ ನೈಟಿ…ಹಿಂಗ ಇಪ್ಪತ್ತನಾಲ್ಕ ತಾಸು ನೈಟಿ ನೋಡಿ ನೋಡಿ ತಲಿ ಕೆಟ್ಟ ಹಗಲ ಹೊತ್ತಿನಾಗ ನೈಟಿ ಬ್ಯಾನ ಮಾಡಿದರು. ಮಜಾ ಅಂದರ ಗ್ರಾಮ ಪಂಚಾಯತಿ ಆರ್ಡರ ಹೆಣ್ಣ ಮಕ್ಕಳ ಪಾಪ ಹೂಂ ಅಂತ ಒಪಗೊಂಡ ಈಗ ಹಗಲ ಹೊತ್ತಿನಾಗ ನೈಟಿ ಒಗದ ಹಗ್ಗಕ್ಕ ಒಣಾ ಹಾಕಿರ್ತಾರಂತ. ಏನ್ಮಾಡ್ತೀರಿ?
ಅಲ್ಲಾ ಹಂಗ ಹಿಂಗ ಇಪ್ಪತ್ತನಾಲ್ಕ ತಾಸ ನೈಟಿ ಹಾಕ್ಕೊಂಡರ ಯಾರಿಗೆ ತಲಿಕೆಡಂಗಿಲ್ಲ ಬಿಡ್ರಿ, ಹಂಗ ಈ ನೈಟಿ ಒಳಗ ಮನ್ಯಾಗ ಹಗಲ ಹೊತ್ತಿನಾಗ ಹಾಕ್ಕೊಳ್ಳಿಕ್ಕೆ ಒಂದ, ರಾತ್ರಿಗೆ ಒಂದ, ಒಣ್ಯಾಗ ಹಾಲ ತರಲಿಕ್ಕೆ ಬ್ಯಾರೆ, ಒಂದ ಚೂರ ದೂರ ಹೋಗಿ ಅಂಗಡ್ಯಾಗಿಂದ ಸಣ್ಣ-ಪುಟ್ಟ ಸಾಮಾನ ತರಲಿಕ್ಕೆ ಒಂದ, ಊರಿಗೆ-ಕೇರಿಗೆ ಹೋದರ ಬ್ಯಾರೆ ನೈಟಿ ಅಂತ ಒಂದ ನಾಲ್ಕ ಐದ ಟೈಪ್ ಇರ್ತಾವ. ಅದಕ್ಕ ನಾ ಹೇಳಿದ್ದ ಅರ್ಧಾ ಸಂಸಾರ ಹೆಣ್ಣಮಕ್ಕಳದ ನೈಟಿ ಮ್ಯಾಲೆ ಹೋಗ್ತದ ಅಂತ. ಒಂದ ಮಾತನಾಗ ಹೇಳಬೇಕ ಅಂದರ ಇವರ ಇಡಿ ಜೀವನಾನ ನೈಟಿ ಮ್ಯಾಲೆ ಕಳಿ ಅಂದರೂ ಕಳಿತಾರ ಬಿಡ್ರಿ…ಮತ್ತ ಅಷ್ಟರಾಗ ಮುಸರಿ ತಿಕ್ಕಲಿಕ್ಕೆ, ಅರಬಿ ಒಗಿಲಿಕ್ಕೆ, ಕಸಾ ಹೊಡಿಲಿಕ್ಕೆ ಬ್ಯಾರೆ ನೈಟಿನ ಮತ್ತ, ಆ ನೈಟಿ ಅಂತೂ ಇಷ್ಟ ಖಮ್ಮಗ ಇರ್ತಾವ ಅಲಾ ! ಅಯ್ಯಯ್ಯ. ಅವ ಅಂತು ಮುಂದ ಹರದ ಮ್ಯಾಲೆ ನೆಲಾ ಒರಸಲಿಕ್ಕೂ ಬರಂಗಿಲ್ಲಾ ಅಷ್ಟ ಜೀರ್ಣ ಆಗಿರ್ತಾವ.
ನಮ್ಮ ಜೋಳದ ಓಣಿ ಮನಿ ಕಡೆ ಒಬ್ಬರ ಪ್ಯಾಟಿ ಅಂತ ಇದ್ದರು, ಅವರದ ದೊಡ್ದ ಕುಟುಂಬ, ಅವರ ಮನ್ಯಾಗ ಒಂದ ಐದಾರ ಮಂದಿ ಹೆಣ್ಣ ಮಕ್ಕಳ ಇದ್ದರು, ಇನ್ನ ಒಬ್ಬಬ್ಬರಿಗೆ ನಾಲ್ಕೈದ ಥರದ ನೈಟಿ, ಹಿಂಗಾಗಿ ಯಾವಾಗಲೂ ಅವರ ಮನಿ ಮುಂದ ಹಗ್ಗಾ ಕಟ್ಟಿ ಹತ್ತ-ಹದಿನೈದ ನೈಟಿ ಓಣಾ ಹಾಕಿರ್ತಿದ್ದರು. ಯಾರರ ಓಣ್ಯಾಗ ಪ್ಯಾಟಿಯವರ ಮನಿ ಎಲ್ಲೇ ಅಂತ ಕೇಳಿದರ ಮಂದಿ ಈ ಲೈನನಾಗ ಯಾರ ಮನಿ ಮುಂದ ನೈಟಿ ಹಾಕ್ಯಾರ ಅದ ಪ್ಯಾಟಿಯವರ ಮನಿ ಅಂತ ಹೇಳಿ ಕಳಸ್ತಿದ್ದರು. ಅಲ್ಲಾ ಹಂಗ ಅವರ ಮನಿಗೆ ನಾವೇಲ್ಲಾ ನೈಟಿಯವರ ಮನಿ ಅಂತನ ಕರಿತಿದ್ವಿ ಆ ಮಾತ ಬ್ಯಾರೆ.
ಆದರೂ ನಂಗ ಒಂದ ಕಡೆ ಈ ಸುದ್ದಿ ಓದಿ ಈ ನೈಟಿ ಕಾಟ ತಪ್ಪತು ಅಂತ ಖುಶಿ ಆತ ಆದರ ಒಂದ ಕಡೆ ದುಃಖನೂ ಆತ ಅನ್ನರಿ, ಅಲ್ಲಾ ವರ್ಷಕ್ಕ ಎರಡ ನೈಟಿ ಕೊಡಸಿದ್ದರ ಮುಗಿತಿತ್ತ ಇನ್ನ ಅದನ್ನ ಬ್ಯಾನ ಮಾಡಿದರ ನಮ್ಮ ಖರ್ಚ ಜಾಸ್ತಿ ಆಗ್ತದಲಾ ಅಂತ ಸಂಕಟಾ ಆಗಲಿಕತ್ತ.
ಅಲ್ಲಾ ಹಂಗ ಇದ ಎಲ್ಲಾ ಕಡೆ ಏನ ಅಪ್ಲಿಕೇಬಲ್ ಅಲ್ಲಾ ಆದರೂ ಎಲ್ಲರ ಇದ ವೈರಲ್ ಆಗಿ ಇಡಿ ಇಂಡಿಯಾ ತುಂಬ ನೈಟಿ ಬ್ಯಾನ ಮಾಡಿದರ ಮುಂದ ಏನ ಗತಿ ಅಂತೇನಿ?
ಅದರಾಗ ನಮ್ಮ ದೋಸ್ತ ಒಬ್ಬಂವ ದುರ್ಗದ ಬೈಲ ಬ್ರಾಡವೇ ಒಳಗ ಹೋಲಸೇಲನಾಗ ನೈಟಿ ಮಾರತಾನ, ಪಾಪ ಅವನ ಉಪಜೀವನ ಮುಂದ ಹೆಂಗ ಅಂತ ಅನಿಸಿ ಅವಂಗ ಈ ಸುದ್ದಿ ಹೇಳಿದೆ. ಅವಂಗ ಇದನ್ನ ಕೇಳಿ ತಲಿ ಕೆಟ್ಟ ಹೋತ.
“ಏ, ಬುದ್ಧಿ ಇಲ್ಲಲೇ ಅವರಿಗೆ…ಮೊದ್ಲ ನಮಗ gst ಬಂದಮ್ಯಾಲೆ ಸೀಸನ್ ಇಲ್ಲಾ ಇನ್ನ ಹಿಂತಾದರಾಗ ನೈಟಿ ಬಂದ ಮಾಡಿದರ ನಾವೇನ ಇನ್ನ ನೈಟಿ ಬಿಟ್ಟ ಮತ್ತ ಪರಕಾರ ಮಾರಬೇಕೇನ?” ಅಂತ ಅಂದಾ. ಅಲ್ಲಾ ಪಾಪ ಅಂವಾ ಮೊದ್ಲ ಪರಕಾರ ಮಾರತಿದ್ದಾ, ಯಾವಗ ಪರಕಾರದ ಸೇಲ ಕಡಮಿ ಆತ ಆವಾಗ ನೈಟಿ ಬ್ಯೂಸಿನೆಸ್ ಶುರು ಮಾಡಿದ್ದಾ.
ಹಂಗ ಅಂವಾ ಆ ಸುದ್ದಿ ಓದಿ ಆ ಹಳ್ಳಿ ಮಂದಿ ಹಂಗ್ಯಾಕ ಮಾಡ್ಯಾರ ಅಂತ ತಂದ ಒಂದ ಲಾಜಿಕ ಹಚ್ಚಿ
’ದೋಸ್ತ ಇದೇನ ಆಗೇದ ಗೊತ್ತೇನ….ನನಗ ಅನಸಿದ ಮಟ್ಟಿಗೆ ಆ ಊರಾಗಿನ ಹೆಣ್ಣ ಮಕ್ಕಳೇಲ್ಲಾ ಸೇರಿ ಗಂಡಸರ ನೈಂಟಿ ತೊಗೊಳೊದನ್ನ ನಮ್ಮ ಹಳ್ಳ್ಯಾಗ ಬಂದ ಮಾಡಿಸಿದ್ದರಲಾ ಹಂಗ ಬಂದ ಮಾಡಿಸಿರಬೇಕ…ಅದಕ್ಕ ಗಂಡಸರ ತಲಿಕೆಟ್ಟ ’ನಮ್ಮ ನೈಂಟಿ ಬಂದ ಮಾಡ್ಯಾರ ತಡಿ ನಾವ ಇವರ ನೈಟಿನರ ಬಂದ ಮಾಡ್ಸೋಣ’ ಅಂತ ನೈಟಿ ಬ್ಯಾನ ಮಾಡಿಸ್ಯಾರ ತೊಗೊ’ ಅಂತ ಅಂದಾ. …ಅಂದರ ಅವನ ಪ್ರಕಾರ ’ನೀವು ನೈಂಟಿ ಬ್ಯಾನ ಮಾಡಿಸಿರಿ…ನಾವ ನೈಟಿ ಬ್ಯಾನ ಮಾಡ್ತೇವಿ’ ಅನ್ನೋ ಲಾಜಿಕ.
ಹಂಗ ನಂಗ ಅಂವಾ ಹೇಳೊ ಲಾಜಿಕ ಕರೆಕ್ಟ ಇದ್ದರೂ ಇರಬಹುದು ಬಿಡ್ರಿ. ಅಲ್ಲಾ ಹಿಂದಕ ನಮ್ಮ ಕರ್ನಾಟಕದಾಗ ಒಂದ ಹಳ್ಳ್ಯಾಗ ’ಸರಾಯಿ ಅಂಗಡಿ’ ಇದ್ದಲ್ಲೆ ಆ ಹಳ್ಳಿ ಹೆಣ್ಣ ಮಕ್ಕಳೇಲ್ಲಾ ಸೇರಿ ’ಸರಾಯಿ ಮುಕ್ತ ಗ್ರಾಮ’ ಮಾಡಬೇಕ ಅಂತ ಸ್ಟ್ರೈಕ್ ಮಾಡಿ ’ಸರಾಯಿ ಅಂಗಡಿ’ ಮುಚ್ಚಸಿಸಿದ್ದ ಗೊತ್ತ ಇರಬೇಕಲಾ, ಪಾಪಾ ಸರಾಯಿ ಮಾರಿ ಉಪಜೀವನ ಮಾಡೋರಿಗೆ ಮತ್ತ ಅದ ಇಲ್ಲದ ಬದಕಲಾರದೋರಿಗೆ ಸಿಕ್ಕಾ ಪಟ್ಟೆ ತ್ರಾಸ ಆಗಿತ್ತ ಅದ ಬಂದ ಆದಾಗ. ಆದರ ಹೆಣ್ಣ ಮಕ್ಕಳ ಸ್ಟ್ರೈಕ್ ಮಾಡಿ ಹನಮಂತ ದೇವರ ಗುಡಿ ಕಟ್ಟಿ ಮ್ಯಾಲೆ ಮೀಟಿಂಗ್ ಮಾಡಿ ಇನ್ನ ಮುಂದ ನಮ್ಮ ಊರಾಗ ಯಾರು ಕುಡಿಯಂಗಿಲ್ಲಾ, ಯಾರು ಮಾರಂಗಿಲ್ಲಾ, ಹಂಗ ಅಪ್ಪಿ ತಪ್ಪಿ ಕುಡದರ ಐದ ನೂರ ರೂಪಾಯಿ ದಂಡ, ಮಾರಿದರ ಸಾವಿರ ರೂಪಾಯಿ ದಂಡ ಅಂತ ಫಿಕ್ಸ ಮಾಡಿ ’ಸರಾಯಿ ಮುಕ್ತ ಗ್ರಾಮ’ಮಾಡಸಿದ್ದರು. ಅಲ್ಲಾ ಹಂಗ ಅದ ಖರೇನ ಒಳ್ಳೆ ಕೆಲಸ ಬಿಡ್ರಿ, ಕುಡಿಯೋದರಿಂದ ಸಿಕ್ಕಾ ಪಟ್ಟೆ ದುಷ್ಪರಿಣಾಮ ಆಗ್ತಾವ, ಸಂಸಾರ ಹಳ್ಳಾ ಹಿಡಿತಾವ, ಹುಡುಗರ ಕೆಟ್ಟ ಹಾದಿ ಹಿಡಿತಾರ, ಈಗ ಹೆಂಗ ಹೆಣ್ಣ ಮಕ್ಕಳ ಇಪ್ಪತ್ತನಾಲ್ಕ ತಾಸು ನೈಟಿ ಹಾಕೋತಾರ ಹಂಗ ಇಪ್ಪತ್ತನಾಲ್ಕ ತಾಸ ನೈಂಟಿ ಹಾಕೋರ ಇರ್ತಾರ, ಹಿಂಗಾಗಿ ಸರಾಯಿ ಮುಕ್ತ ಗ್ರಾಮ ಅಗದಿ ಒಪಗೋಳೊ ಮಾತ ಅನ್ನರಿ.
ಅದಕ್ಕ ಅವನ ಲಾಜಿಕ ಪ್ರಕಾರ ಹೆಣ್ಣಮಕ್ಕಳ ’ಸರಾಯಿ ಮುಕ್ತ ಗ್ರಾಮ’ ಮಾಡಿದ್ದರ ಸೇಡ ತೀರಿಸಿಗೊಳ್ಳಿಕ್ಕೆ ಹಿಂಗ ಗಂಡಸರು ’ನೈಟಿ ಮುಕ್ತ ಗ್ರಾಮ’ ಮಾಡ್ಯಾರ ಅಂತಾನ, ಅಲ್ಲಾ ಹಂಗ ನೈಟಿ ಬ್ಯಾನ ಮಾಡೋದ ಗೈರ ಕಾನೂನ ಬಿಡ್ರಿ..ಆದರೂ ಏನ ಅನ್ನರಿ ’ನೀವು ನೈಂಟಿ ಬ್ಯಾನ ಮಾಡಿಸಿರಿ…ನಾವ ನೈಟಿ ಬ್ಯಾನ ಮಾಡ್ತೇವಿ’ಅನ್ನೊ ಲಾಜಿಕ ತಪ್ಪ.
ಅಲ್ಲಾ ನೀವೇನ ಅಂತೀರಿ…ನೈಟಿ ಬೇಕೋ ಇಲ್ಲಾ ನೈಂಟಿ ಬೇಕೊ? ಏನ ಎರಡು ಬೇಕೋ?

Leave a Reply

Your email address will not be published. Required fields are marked *

About Me

ಹುಟ್ಟಿದ್ದು 1973, ಅಕ್ಟೋಬರ 13ಕ್ಕ. ಹೆಸರಿಗೆ ಹುಟ್ಟಿದ್ದ ಶಿವಮೊಗ್ಗಾ ಆದರು, ಬೆಳದಿದ್ದು-ಬಲತಿದ್ದು-ಕಲತಿದ್ದು- ಕಳತಿದ್ದು (ಪಕ್ವವಾಗಿದ್ದು) ಎಲ್ಲಾ ಹುಬ್ಬಳ್ಳಿ ಒಳಗ, ಕಲತಿದ್ದು ಬಿ.ಏಸ್ಸಿ, ಕೋತಂಬರಿ ಕಾಲೇಜ ಹುಬ್ಬಳ್ಳಿ ಒಳಗ ಮುಂದ ಎಮ್.ಬಿ.ಎ (ಸಿಂಬಾಯ್ಸಿಸ್- ಪೂಣೆ). ಸದ್ಯೇಕ...

Follow me on Facebook

ನನ್ನ ಸಂಪೂರ್ಣ ಪ್ರೊಫೈಲ್ ವೀಕ್ಷಿಸಿ