’ರ್ರಿ…..ಅವರು ನೀವು ಒಂದ ವಾರ್ಗಿ ಏನ? ’

ಮೊನ್ನೆ ಗಣಪತಿ ಹಬ್ಬದ ಸಾಮಾನ ಖರೀದಿ ಮಾಡ್ಲಿಕ್ಕೆ ದುರ್ಗದ ಬೈಲಿಗೆ ದಂಪತ್ ಹೋದಾಗ ಅಚಾನಕ್ ಆಗಿ ನನ್ನ ಜೊತಿ ಒಂದನೇತ್ತಾದಿಂದ ಏಳನೇತ್ತಾ ತನಕಾ ಕಲತ ಪರ್ವೇಜ್ ಭೇಟ್ಟಿ ಆದಾ. ನನ್ನ ನೋಡಿದವನ ಒಮ್ಮಿಕ್ಕಲೇ ಜೋರಾಗಿ
’ಲೇ….ಭಟ್ಟಾ…ನಿಲ್ಲಲೇ ಮಗನ…….. ನೋಡಿದರೂ ನೋಡಲಾರದಂಗ ಹೋಗ್ತಿ ಅಲಾ…..’ ಅಂತ ಒದರಿದಾ. ಹಂಗ ನನಗ ಅಂವಾ ಯಾವಾಗಲೂ ಭಟ್ಟಾ ಅಂತ ಕರಿತಿದ್ದಾ. ಅಲ್ಲಾ ಹಂಗ ನನಗಂತೂ ಇಡಿ ಸಾಲಿನ, including ಮಾಸ್ತರ ಸಹಿತ ’ಲೇ…ಭಟ್ಟಾ’ ಅಂತನ ಕರಿತಿದ್ದರ ಆ ಮಾತ ಬ್ಯಾರೆ. ನಾ ಕಲತದ್ದ ಘಂಟಿಕೇರಿ ಒಳಗ, ಅಲ್ಲಿ ಕನ್ನಡ ಗಂಡು ಮಕ್ಕಳ ಶಾಲೆ ನಂ.೫, ಮುಂದ ನ್ಯಾಶನಲ್ ಹೈಸ್ಕೂಲ್, ಅಲ್ಲೇ ನಮ್ಮಂತಾ ಉಡಾಳ ಹುಡುಗರ ಜಾಸ್ತಿ. ಇನ್ನ ಹಂತಾವರ ನಡಕ ಕುಡ್ಡ ಗಣ್ಣಾಗ ಮೆಳ್ಳ ಗಣ್ಣ ಶ್ರೇಷ್ಟ ಅನ್ನೊಹಂಗ ನಾ ಸಾಲಿಗೆ ಯಾವಾಗಲೂ first rank . ಹಿಂಗಾಗಿ ಎಲ್ಲಾರೂ ಭಟ್ಟ ಶಾಣ್ಯಾ ನನ್ಮಗಾ ಅಂತನ ಕರಿತಿದ್ದರು. ಪ್ರೀತಿಯಿಂದ ಕರದರು ಭಟ್ಟನ, ಬೈದ ಕರದರನು ಭಟ್ಟನ. ಸಾಲಿ ಬಾಜು ಇದ್ದ ಕ್ರಿಶ್ಚಿಯನ್ ಕಾಲನಿ ಮೇರಿನೂ ಭಟ್ಟನ ಅಂತಿದ್ಲು, ಮಂಟೂರ ರೋಡ ಮುಲ್ಲಾನೂ ಭಟ್ಟನ ಅಂತಿದ್ದಾ. ಅಂವಾ ಭಟ್ಟಾ ಅಂತ ಒದರಿದಾಗ ನನ್ನ ಕಿವಿ ಒಮ್ಮಿಕ್ಕಲೇ ಚಿಗರಿ ಬಿಡ್ತ, ಯಾರೋ ನಂಗ ಕರದರ ಅಂತ ಅನಸ್ತ. ಮುಂದ ನೋಡಿದರ ಈ ಮಗಾ, ಹಂಗ ಅಂವಾ ನನಗ ಭೇಟ್ಟಿ ಆಗಲಾರದ ಭಾಳ ವರ್ಷ ಆಗಿತ್ತ. ಆದರ ಅವನ ಮಾರಿ ನೋಡಿದ ಕೂಡ್ಲೆ ಅವನ ಹೆಸರ ನೆನಪಾತ.
’ಏ…ಹೇಳಲೇ ಫಾರೂಕಿ’ ಅಂತ ನಾ ಅಂದ ಅಲ್ಲಾ-ಬೆಲ್ಲಾ ತೊಗೊಂಡ ಅಂದರ ಅಪಗೊಂಡ ಭಾಳ ದಿವಸದ ಮ್ಯಾಲೆ ಸಿಕ್ಕಿ, ಈ ಕಡೆ ಯಾಕ ಬಂದಿ ಆದು ಇದು ಮಾತಾಡಿ, ಕಡಿಕೆ ಬಾಜು ನಿಂತಿದ್ದ ನನ್ನ ಹೆಂಡ್ತಿಗೆ ಪರಿಚಯ ಮಾಡಿಸಿಸಿ ಇಂವಾ ನನ್ನ ಚಡ್ಡಿ ದೋಸ್ತ ಅಂತ ಎಲ್ಲಾ ಹೇಳೋದ ಆತ.
ಮುಂದ ಮನಿಗೆ ಬರೊ ಪುರಸತ್ತ ಇಲ್ಲದ ನನ್ನ ಹೆಂಡ್ತಿ “ರ್ರಿ ನೀವು ಅವರು ಒಂದ ವಾರ್ಗಿ ಏನ?” ಅಂತ ಕೇಳಿದ್ಲು. ಹೌದ ಯಾಕ ಅಂತ ಕೇಳಿದರ.
ಅವರ ನೋಡ್ರಿ ಎಷ್ಟ ಅಗದಿ ಟಿಪ್-ಟಾಪ್ ಆಗಿ ಟೈ-ಗೀ ಹಾಕ್ಕೊಂಡ ಹೆಂಗ ಫಿಟ್ & ಯಂಗ್‌ಇದ್ದಾರ, ನೀವ ನೋಡಿದರ ವಾಕಿಂಗ್ ಹೋಗಬೇಕಾರು ಮಂದಿಗೆ ಲಿಫ್ಟ ಕೇಳ್ತೀರಿ’ ಅಂತ ಡೈಲಾಗ್ ಹೊಡದ್ಲು.
’ಲೇ…ಅವಂಗ ಕೂದ್ಲ ಅವ, ನಂಗ ಇಲ್ಲಾ, ಇಷ್ಟ ಫರಕ್….ಆ ಮಗಾ ಕೂದ್ಲಕ್ಕ ಮದರಂಗಿ, ಬಣ್ಣಾ ಹಚ್ಚ್ಯಾನ ಹಿಂಗಾಗಿ ಯಂಗ್ ಕಾಣ್ತಾನ. ಮ್ಯಾಲೆ ಅಂವಾ ಮೆಡಿಕಲ್ ರೆಪ್ , ಹಿಂಗಾಗಿ ಯಾವಾಗಲೂ ಟಿಪ್-ಟಾಪ್ ಇರ್ತಾನ. ನಾವಿಬ್ಬರೂ ಒಂದ ವಾರ್ಗಿನ ತೊಗೊ’ ಅಂತ ಅಕಿಗೆ ತಿಳಿಸಿ ಹೇಳೊದರಾಗ ನಂಗ ರಗಡ ಆತ.
ಅಲ್ಲಾ ಹಂಗ ಕೆಲವೊಬ್ಬರಿಗೆ ಕೂದ್ಲ ಲಗೂನ ಬೆಳ್ಳಗ ಆದರ, ಕೆಲವೊಬ್ಬರಿಗೆ ಹೋಗೆ ಬಿಡ್ತಾವ. ಅದರಾಗ ನಮ್ಮ ಹೆರಿಡಿಟಿನ ಹಂಗ ಅದ ಹಿಂಗಾಗಿ ನನಗ ಕೂದ್ಲ ಎರೆಡ ಹಡಿಯೊ ಪುರಸತ್ತ ಇಲ್ಲದ ಸಂಸಾರದ ಕಾಟಕ್ಕ ಹೊಂಟ ಬಿಟ್ಟವ ಅನ್ನರಿ. ಈಗಂತೂ ನನ್ನ ಹಣೆ ತುಂಬ ಹಣೇಬರಹ ಬರೆಯೋ ಹಂಗ ಆಗೇದ ಅಂದರ I have more face wash to less hair to comb ಅಂತಾರಲಾ ಹಂಗ ಆಗೇದ. ಒಂದ ರೀತಿಯಿಂದ ಭಾಳ ಛಲೋ ಅನ್ನರಿ ತಲಿಗೆ ಎಣ್ಣಿ ಹಚಕೊಬೇಕಂತ ಇಲ್ಲಾ, ಶ್ಯಾಂಪೂ ಬೇಕಾಗಂಗಿಲ್ಲಾ, ದಿನಾ ತಲಿ ಮ್ಯಾಲೆ ಸ್ನಾನ ಮಾಡಿದರು ಬೋರ್ಗಲ್ ಮ್ಯಾಲೆ ನೀರು ಸುರಿದಂತೆ…ತಂಪ ಆತ, ನೆಗಡಿ ಆತ ಅಂತ ಅನ್ನೋ ಹಂಗ ಇಲ್ಲೇ ಇಲ್ಲಾ.
ಆದರೂ ನನ್ನ ಹೆಂಡ್ತಿ ಹೇಳಿದಂಗ ನಮ್ಮ ಪರ್ವೇಜ್ ಮೊದ್ಲಿಂದ ಅಗದಿ ಫಿಟ್ ಮನಷ್ಯಾ ಬಿಡ್ರಿ ಹಿಂಗಾಗಿ ನನಕಿಂತ ಒಂದ ಚೂರ ಯಂಗ್ ಕಾಣ್ತಿದ್ದಾ, ಅದೂ ಕೂದ್ಲ ಇದ್ದಿದ್ದಕ್ಕ ಅನ್ನರಿ. ಹಂಗ ಖರೇ ಹೇಳ್ಬೇಕಂದರ ಒಂದಿಷ್ಟ ಕ್ಲಾಸಮೇಟ್ ಹೆಂಡಂದರ ನನ್ನ ನೋಡಿ ತಮ್ಮ ಗಂಡಂದರಿಗೆ
’ನೋಡ್ರಿ…ಆಡೂರವರ ಕ್ಲಾಸ್ ಮೇಟ್ ಅಂತಿರಿ, ಅವರ ಹೆಂಗ ಇದ್ದಾರ, ನೀವ ಹೆಂಗ ಇದ್ದೀರಿ’ ಅಂತನು ಅಂತಾರ. ಅಂದರ ನಾ ಹೆಂಗ ಯಂಗ್ ನೂ ಕಾಣ್ತೇನಿ ಅಂತ ಅರ್ಥ ಇಷ್ಟ.
ಇನ್ನೊಂದ ಮಜಾ ಅಂದರ ನಮ್ಮ ದೋಸ್ತ ಪ್ರಭ್ಯಾ ಲಗ್ನಾ ಮಾಡ್ಕೊಬೇಕಾರ ಒಂದ ಐದ-ಆರ ವರ್ಷ ತಂದ age ಕಡಮಿ ಹೇಳಿ ಅದರಕಿಂತ ಆರ-ಏಳ ವರ್ಷ ಕಡಿಮೆ ವಯಸ್ಸಿನ ಕನ್ಯಾ ಮಾಡ್ಕೊಂಡಿದ್ದಾ. ಹಂಗ ಅಂವಾ actually ನೋಡ್ಲಿಕ್ಕೂ ಕಡಮಿ ವಯಸ್ಸಿನವರ ಕಂಡಂಗ ಕಾಣ್ತಿದ್ದಾ ಮತ್ತ ಇವತ್ತೂ ವರಾ ಕಂಡಂಗ ಕಾಣ್ತಾನ ಆ ಮಾತ ಬ್ಯಾರೆ. ಆದರ ಅವನ ಹೆಂಡ್ತಿ ಮಾತ್ರ ಪಾಪ ಗಂಡ ಹೇಳಿದ್ದ ವಯಸ್ಸ ನಂಬಿದ್ಲ. ಈ ಮಗಾ ತನ್ನ ವಯಸ್ಸೇನೋ ಕಡಮಿ ಹೇಳಿದ್ದಾ ಮ್ಯಾಲೆ ನಮಗೇಲ್ಲಾ ಇವರ ನನ್ನ ಕ್ಲಾಸಮೇಟ್, ಅಂವಾ ನಾಲ್ಕನೇತ್ತಾದಿಂದ ದೋಸ್ತ, ಇಂವಾ ಹೈಸ್ಕೂಲನಿಂದ ದೋಸ್ತ ಅಂತೇಲ್ಲಾ ಪರಿಚಯನೂ ಮಾಡಿಸಿದ್ದಾ. ಅಕಿಗೆ ಯಾಕೊ ಗಂಡನ ವಯಸ್ಸಿನ ಮ್ಯಾಲೆ ಡೌಟ ಬರ್ತಿತ್ತ.
ನಾವ ನಮ್ಮ ಬರ್ಥಡೇ ಮಾಡ್ಕೊಂಡಾಗೊಮ್ಮೆ ಅವನ ಹೆಂಡ್ತಿ ನಮ್ಮ ಹೆಂಡ್ತಿಗೆ
’ನಿಮ್ಮ ಮನೆಯವರಿಗೆ ಎಷ್ಟ ತುಂಬಿ ಎಷ್ಟರಾಗ ಬಿತ್ತ’ ಅಂತ ಕೇಳೋಕಿ, ಅಕಿಗೆ ಹಂಗ ನಮ್ಮ ವಯಸ್ಸ ಬಗ್ಗೆ ಇಂಟರೆಸ್ಟ ಇರಲಿಲ್ಲಾ, ತನ್ನ ಗಂಡನ ಕರೆಕ್ಟ age ತಿಳ್ಕೊಳಿಕ್ಕೆ ಕೇಳೋಕಿ. ಇನ್ನ ನಮ್ಮ ಹೆಂಡಂದರ ಹುಚ್ಚರಂಗ ಇದ್ದದ್ದ ವಯಸ್ಸ ಹೇಳೊರ, ಅದರಾಗ ನಮ್ಮಕಿ ಹಂತಾವರಂತೂ ಸುಳ್ಳ-ಸುಳ್ಳ ಗಂಡನ ವಯಸ್ಸ ಜಾಸ್ತಿ ಹೇಳೊರ.
ಅಕಿ ಮನಿಗೆ ಹೋಗಿ ’ನೀವು ಆಡೂರವರ ವಾರ್ಗಿ ಅಂತೀರಿ, ಅವರದ ಇವತ್ತ ನಲವತ್ತೆಂಟನೇ ಬರ್ಥಡೇ ಆತ ನೀವು ನೋಡಿದರ ಇನ್ನೂ ನನಗ ನಲವತ್ತೆರಡ ಅಂತಿರಿ, ಅದ ಹೆಂಗ’ ಅಂತ ಕೇಳಿದರ ’ಏ..ಆ ಮಗಾ ಫೇಲ್ ಆಗಿ ಆಗಿ ನನ್ನ ಕ್ಲಾಸಮೇಟ್ ಆಗ್ಯಾನ ತೊಗೊ’ ಅಂತ ಕನ್ವಿನ್ಸ್ ಮಾಡಿ ಬಿಡ್ತಿದ್ದಾ. ಅವನ ಹೆಂಡ್ತಿ ಅದನ್ನ ನಂಬಿದ್ಲು. ಒಂದ ದಿವಸ ಅದ ನನ್ನ ಹೆಂಡ್ತಿಗೆ ಗೊತ್ತಾಗಿ ಬಿಡ್ತ. ನಮ್ಮಕಿಗೆ ತಲಿ ಕೆಡ್ತ
’ನನ್ನ ಗಂಡ ನೋಡಿದರ ಬಾಲವಾಡಿ ಇಂದ ಹಿಡದ ಡಿಗ್ರಿ ತನಕಾ rank student, ಹಂತಾವಂಗ ಇಂವಾ ಫೇಲ್ ಆಗಿದ್ದಾ ಅಂತ ಹೆಂಗ ಅಂದಾ ಅಂತ ಅಕಿಗೆ ಫೋನ್ ಮಾಡಿ
’ಏ ನಿನ್ನ ಗಂಡಂದ ಬರ್ಥ ಸರ್ಟಿಫಿಕೇಟ್ ತಗದ ನೋಡ, ಆಧಾರ ತಗದ ನೋಡ ..ನಿಮ್ಮ ಮನೆಯವರ ನಮ್ಮ ಮನೆಯವರು ಒಂದ ವಾರ್ಗಿ, ಕನ್ಯಾ ಲಗೂ ಸಿಗಲಿಲ್ಲಾ ಅಂತ ನಿನ್ನ ಗಂಡ ವಯಸ್ಸ ಕಡಮಿ ಮಾಡ್ಕೊತ ಹೋಗ್ಯಾನ’ ಅಂತ ಇಕಿ ಇದ್ದ ಹಕೀಕತ್ ಹೇಳಿ ಬಿಟ್ಟಳು. ಮುಂದ ಅವರ ಮನ್ಯಾಗ ಏನ ಇಶ್ಯೂ ಆತ ಅದ ಇಲ್ಲೆ ಬ್ಯಾಡಾ, ಅದ ಮುಂದ ಒಂದ ದಿವಸ ಇನ್ನೊಂದ ಆರ್ಟಿಕಲ್ ಆಗ್ತದ.
ಆವಾಗಿಂದ ನನ್ನ ಹೆಂಡ್ತಿ ಯಾವದರ ಹೊಸಾ ದೋಸ್ತನ ಪರಿಚಯ ಮಾಡಿಸಿದರ ’ ಇವರ ನಿಮ್ಮ ವಾರ್ಗಿ ಏನ’ ಅಂತ ಕೇಳಲಿಕ್ಕೆ ಶುರು ಮಾಡಿದ್ಲು. ನಾ ಅಕಿ ಹಂಗ ಕೇಳೊದನ್ನ ಕೇಳಿ ಕೇಳಿ
ಇತ್ತೀಚಿಗೆ ರಸ್ತೆದಾಗ ಯಾರರ ನಮ್ಮ ದೋಸ್ತರ ಭೇಟ್ಟಿ ಆದರ ಅವರ ನನ್ನಕಿಂತ ವಯಸ್ಸಾದೋರ ಕಂಡಂಗ ಕಂಡರ ಇಷ್ಟ ’ಇಂವಾ ನಾನೂ ಚಡ್ಡಿ ದೋಸ್ತ, ನನ್ನ ವಾರ್ಗಿನ’ ಅಂತ ಪರಿಚಯ ಮಾಡಸ್ತೇನಿ. ಯಾರರ ನನ್ನಕಿಂತ ಯಂಗ್ ಕಾಣೋ ದೋಸ್ತ ಭೆಟ್ಟಿ ಆದರ ಇಂವಾ ನಮ್ಮ ಕಾಲೇಜನಾಗ ಜೂನಿಯರ್ ಇದ್ದಾ ಅಂತ ಹೇಳಿ ಬಿಡ್ತೇನಿ.
ಇಷ್ಟೇಲ್ಲಾ ಪುರಾಣ ಬರದಿದ್ದ ಬರೇ ನಮ್ಮ ಗಂಡ ದೋಸ್ತರ ಬಗ್ಗೆ, ನಮ್ಮಕಿಗೆ ಒಂದ ಸರತೆ ನನ್ನ ವಾರ್ಗಿ ಇದ್ದ ನನ್ನ ಕ್ಲಾಸಮೇಟ್ ಹುಡಗ್ಯಾರನ ಭೇಟ್ಟಿ ಮಾಡಸಸಬೇಕ.
ಹಂಗ ಮೊನ್ನೆಶುಕ್ರಗೌರಿಗೆ ನಮ್ಮ ಮನಿಗೆ ಬಂದ ಮುತ್ತೈದಿ ಅವ್ವಾ ನನ್ನ ಬಾಲವಾಡಿ ಕ್ಲಾಸಮೇಟ.
ಮೂರ ಮಂದಿ ನನ್ನ ಕ್ಲಾಸಮೇಟ್ ಹುಡಗ್ಯಾರ ಈಗ ಅಜ್ಜಿ ಆಗ್ಯಾರ, ಆರ ಮಂದಿ ಗಂಡಂದರದ ಅರವತ್ತ ವರ್ಷದ ಶಾಂತಿ ಆಗೇದ.
ಹಂತಾವರನ ನೋಡಿ ’ನನ್ನ ಗಂಡಗ ಇನ್ನೂ ಅರವತ್ತ ವರ್ಷದ ಶಾಂತಿ ಆಗಿಲ್ಲಾ, ಅವಂಗ ಇನ್ನೂ ಮೊಮ್ಮಕ್ಕಳ ಆಗಿಲ್ಲಾ, ಇವತ್ತೂ ಎರಡನೇ ಸಂಬಂಧಕ್ಕ ತೊರಿಸಿದರ ವರಾ ಕಂಡಂಗ ಕಾಣ್ತಾನ , ಕೂದ್ಲ ಒಂದ ಇಲ್ಲಾ ಅಂದರ ಏನಾತ’ ಅಂತ ಹೆಮ್ಮೆ ಪಡೋದ ಬಿಟ್ಟ ಹೊದಲ್ಲೇ ಬಂದಲ್ಲೇ ಎಲ್ಲಾ ’ ರ್ರಿ ನೀವ ಅವರ ವಾರ್ಗಿ ಏನ ಕಂತ ಕೇಳ್ತಾಳ’ ಏನ್ಮಾಡ್ತೀರಿ.
ಅಲ್ಲಾ, ನೋಡ್ರಿ ನಾಳೆ ನೀವೇಲ್ಲರ ನಾವ ದಂಪತ್ ಹೊಂಟಾಗ ಭೇಟ್ಟಿ ಆದರ ಸುಳ್ಳ ಸುಳ್ಳ ’ ನಾನು ನಿಮ್ಮ ಮನೆಯವರು ಒಂದ ವಾರ್ಗಿ’ ಅಂತ ಅಂದ ಗಿಂದಿರಿ…..ಮತ್ತ ಅಕಿ ಅದನ್ನ ಒಂದ ಇಶ್ಯೂ ಮಾಡ್ತಾಳ.

One thought on “’ರ್ರಿ…..ಅವರು ನೀವು ಒಂದ ವಾರ್ಗಿ ಏನ? ’

  1. Dear sir prasanthji I read your article every time and it’s so beautiful n pure language of Twin-City
    Being in busy Bangalore without fail i read u r update and also I get more peaceful after reading ಗಿರಮಿಟ್ಟ

    Thanks Vijayavani paper for wonderful update

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

About Me

ಹುಟ್ಟಿದ್ದು 1973, ಅಕ್ಟೋಬರ 13ಕ್ಕ. ಹೆಸರಿಗೆ ಹುಟ್ಟಿದ್ದ ಶಿವಮೊಗ್ಗಾ ಆದರು, ಬೆಳದಿದ್ದು-ಬಲತಿದ್ದು-ಕಲತಿದ್ದು- ಕಳತಿದ್ದು (ಪಕ್ವವಾಗಿದ್ದು) ಎಲ್ಲಾ ಹುಬ್ಬಳ್ಳಿ ಒಳಗ, ಕಲತಿದ್ದು ಬಿ.ಏಸ್ಸಿ, ಕೋತಂಬರಿ ಕಾಲೇಜ ಹುಬ್ಬಳ್ಳಿ ಒಳಗ ಮುಂದ ಎಮ್.ಬಿ.ಎ (ಸಿಂಬಾಯ್ಸಿಸ್- ಪೂಣೆ). ಸದ್ಯೇಕ...

Follow me on Facebook

ನನ್ನ ಸಂಪೂರ್ಣ ಪ್ರೊಫೈಲ್ ವೀಕ್ಷಿಸಿ