ನಿಮ್ಮ ಪಾಲಿಸಿ ಮ್ಯಾಚುರ್ ಆತ ನೀವು ಯಾವಾಗ ಆಗ್ತೀರಿ?

ಮೊನ್ನೆ ಮೇ ತಿಂಗಳದಾಗ ಒಂದ ದಿವಸ ಮುಂಜ ಮುಂಜಾನೆ ಒಂದ sms ಬಂತ. ಇತ್ತೀಚಿಗೆ ವಾಟ್ಸಪ್ ಬಂದಮ್ಯಾಲೆ sms ಬರೋದ ಕಡಮಿ ಆಗ್ಯಾವ. ಹಂಗೇನರ sms ಬಂದರ ಅದ ಎಮರ್ಜೆನ್ಸಿ ಅಂತ ಗ್ಯಾರಂಟೀ ಇರ್ತದ. ಹಿಂಗಾಗಿ ಯಾರದ ಮೆಸೆಜ್ ಅಂತ ನೋಡಿದರ ಅದ LIC ಮೆಸೆಜ್ ಇತ್ತ. ಏ ಇದ ಪ್ರಿಮಿಯಮ್ ರಿಮೈಂಡರ ಇರಬೇಕ, ಮೊದ್ಲ ಲಾಕಡೌನ್ ಆಗಿ ಕೆಲಸ ಇಲ್ಲಾ, ಪಗಾರ ಇಲ್ಲಾ. ಇನ್ನ ಹಂತಾದರಾಗ ಪಾಲಿಸಿ ಡ್ಯೂ ಆಗ್ತಾವ ಅಂತ ತಲಿ ಕೆಟ್ಟ ಮೆಸೆಜ್ ಓದಿದರ
’ನಿಮ್ಮ ಸೊ & ಸೊ ನಂಬರ್ ಪಾಲಿಸಿ ಹಿಂತಾ ತಾರೀಖಿಗೆ ಮ್ಯಾಚುರ್ ಆಗ್ತದ… ನಮ್ಮ ರಿಕಾರ್ಡ್ಸ ಪ್ರಕಾರ ಇದ ನಿಮ್ಮ ಬ್ಯಾಂಕ್ ಅಕೌಂಟ..ಹಂಗೇನರ ಚೇಂಜ್ ಇದ್ದರ ನಮ್ಮ ಬ್ರ್ಯಾಂಚ್ ಆಫೀಸಗೆ ತಿಳಸರಿ’ಅಂತ ಇತ್ತ. ಅದನ್ನ ಓದಿದ್ದ ನನ್ನ ಎದಿ ಧಸಕ್ಕ ಅಂತ. ಹಂಗ ಖರೇ ಹೇಳ್ಬೇಕಂದರ ಇಪ್ಪತೈದ ಸಾವಿರದ್ದ ಪಾಲಿಸಿ ಮ್ಯಾಚುರ್ ಆಗಿ ರೊಕ್ಕ ಬರತದಲಪಾ ಅದು ಅಗದಿ ಆಪದ್ಭಾಂಧವನಗತೆ ಲಾಕಡೌನ ಟೈಮ ಒಳಗ ಅಂತ ಖುಶಿ ಆಗ್ಬೇಕಿತ್ತ ಆದರ ಹಂಗ ಆಗಲಿಲ್ಲಾ. ಉಲ್ಟಾ ನಂಗ ನನ್ನ ಫಸ್ಟ ಪಾಲಿಸಿ ಮ್ಯಾಚುರ್ ಆಗೋ ಅಷ್ಟ ವಯಸ್ಸ ಆತಲಾ ಅಂತ ದುಃಖ ಆತ.
ನನ್ನ ಹೆಂಡ್ತಿಗೆ ಕರದ
’ನೋಡಿಲ್ಲೇ…ನನ್ನ ಒಂದನೇ ಪಾಲಿಸಿ ಮ್ಯಾಚುರ್ ಆತ’ ಅಂತ ಅಗದಿ excite & sad ಆಗಿ ಹೇಳಿದರ ಅಕಿ ’ನೋಡ್ರಿ…ತಿರಗಿ ನಿಮ್ಮ ಪಾಲಿಸಿ ಮ್ಯಾಚುರ್ ಆದ್ರೂ ನೀವೇನ್ ಮ್ಯಾಚುರ್ ಆಗಲಿಲ್ಲಾ’ ಅಂತ ಟಾಂಟ್ ಹೊಡದ್ಲು. ’ಲೇ..ಹುಚ್ಚಿ ನನ್ನ ಮ್ಯಾಚುರಿಟಿ ನಿಂಗೇನ್ ತಿಳಿತದ ತೊಗೊ..ನೀ ಅದನ್ನ ತಿಳ್ಕೊಳೊ ಅಷ್ಟ ಮ್ಯಾಚುರ್ ಇಲ್ಲಾ…ನಾ ಹೇಳಲಿಕತ್ತಿದ್ದ ನಂಗ ಪಾಲಿಸಿ ಮ್ಯಾಚುರ್ ಆಗೊ ಅಷ್ಟ ವಯಸ್ಸಾತು’ ಅಂತ ನಾ ಅಂದರ
’ಅಯ್ಯ..ಮತ್ತ ಬರಬರತ ವಯಸ್ಸ ಹೋಗಲಾರದ ಏನ ಬರ್ತಾವೇನ…ನೀವು ಟಿ.ವಿ ಮುಂದ ಬಾಯಿ ತಕ್ಕೊಂಡ ಇನ್ನೂ ಸನಿ ಲಿಯೊನ್, ಜ್ಯಾಕಲಿನ್ ಪರ್ನಾಂಡೀಸ್ ನೋಡ್ಕೊತ ಕೂತರ ವಯಸ್ಸೇನ ನಿಂತಿರ್ತದ ಅಂತ ತಿಳ್ಕೊಂಡಿರೇನ?’ ಅಂತ ನಂಗ ಜೋರ ಮಾಡಿದ್ಲು. ಏ ಹೋಗ್ಲಿ ಬಿಡ ಇನ್ನ ಮತ್ತ ನಾ ಏನರ ಅನ್ನೋದು ಅಕಿ ಅದಕ್ಕೊಂದ ಏನರ ಅನ್ನೋದ, ಎಲ್ಲಿದ..ಅದರಾಗ ಲಾಕಡೌನ ಆಗಿ ಮನ್ಯಾಗ ಬ್ಯಾರೆ ಇದ್ದೇನಿ, ಎಲ್ಲೆ ಇದ್ದ ಒಂದ ಹೆಂಡ್ತಿನ ವಿರೋಧ ಕಟ್ಗೋಳೊದ ಅಂತ ಸುಮ್ಮನಾದೆ.
ಆದರೂ ಏನ ಅನ್ನರಿ ನನಗ ಹಿಂಗ ನನ್ನ ಒಂದನೇ ಪಾಲಿಸಿ ಮ್ಯಾಚುರ್ ಆತಲಾ ಅಂತ ಇಡಿ ದಿವಸ ಹ್ಯಾಂಗ್ ಒವರ್ ಇತ್ತ. ಒಂದ ಕಡೆ ಇಪ್ಪತ್ತೈದ ಸಾವಿರ ಪಾಲಿಸಿಗೆ ಒಂದ ಅರವತ್ತ ಸಾವಿರ ಬರ್ತದ ಅಂತ ಖುಶಿ ಆದರ ಅತ್ತಲಾಗ ನನ್ನ ಕರಿಯರ್ ಶುರು ಆಗಿ ಇಪ್ಪತ್ತೈದ ವರ್ಷ ಆತಲಾ, ನಂಗ ಅಷ್ಟ ವಯಸ್ಸ ಆತಲಾ ಅಂತ ಮಾನಸಿಕನೂ ಆದೆ ಅನ್ನರಿ.
ಹಂಗ ನಾ 1995 ಮಾರ್ಚ್ ಒಳಗ ಕೆ.ಇ.ಸಿ ನೌಕರಿಗೆ ಹೊಂಟ ಎರಡ ತಿಂಗಳಕ್ಕ ನಮ್ಮ ಕೆ.ಇ.ಸಿ ದೋಸ್ತ ಕುಂಬಾರ ಮನಿಗೆ ಬಂದ ನಾ ಒಲ್ಲೇ ಅಂದರು ನಮ್ಮವ್ವಗ ಗಂಟ ಬಿದ್ದ ಬಿದ್ದ
’ಮಗಗ ದೊಡ್ಡ ನೌಕರಿ ಸಿಕ್ಕದ, ಇನ್ನೂ ಸಣ್ಣ ಹುಡುಗ ಇದ್ದಾನ…ಹಿಂಗ ರೊಕ್ಕ ಜಾಸ್ತಿ ಬಂದರ ಅಡ್ಡ ದಾರಿ ಹಿಡಿತಾನ, ಒಂದ ಪಾಲಿಸಿ ಮಾಡಿಸಿ ಬಿಡ್ರಿ….ಮ್ಯಾಲೆ ಇನ್ನೂ ಲಗ್ನ ಆಗಿಲ್ಲಾ, ಹಿಂಗಾಗಿ ನೀವ ನಾಮಿನೀ ಆಗ್ತೀರಿ…ನಾಳೆ ಲಗ್ನ ಆತ ಅಂದರ ಅವ್ವನ್ನ ಮರತ ಬರೇ ಹೆಂಡ್ತಿನ್ನ ನಾಮೀನೀ ಮಾಡ್ತಾರ’ ಅಂತ ಕನ್ವಿನ್ಸ್ ಮಾಡಿ ಒಂದನೇ ಪಾಲಿಸಿ ಮಾಡಿಸಿದ್ದಾ. ಅದು ತಿಂಗಳಿಗೆ ನೂರಾ ಹತ್ತ ರೂಪಾಯಿದ್ದ.
ಹಂಗ ಅಂವಾ ನಮ್ಮ ಕಂಪನಿ ಒಳಗ ಮೇಲ್ ನರ್ಸ ಅಂತ ಇದ್ದಾ. ಅಂವಾ ಕಂಪನಿಗೆ ಯಾರ ಹೊಸ್ದಾಗಿ ಸೇರಿದರು ಒಂದನೇ ತಿಂಗಳದ್ದ ಪಗಾರ ಆಗೋದ ತಡಾ LIC ಮಾಡಸ ಅಂತ ಮನಿಗೆ ಬಂದ ಬಿಡ್ತಿದ್ದಾ. ಇನ್ನ ನಾವು kec ಹಂತಾ ದೊಡ್ಡ ಕಂಪನಿ ಒಳಗ ಜಾಬ್ ಸಿಕ್ಕದ್ದ ಖುಶಿ ಒಳಗ ಇರ್ತಿದ್ವಿ, ಇನ್ನ ಪರ್ಸನಲ್ ಡಿಪಾರ್ಟಮೆಂಟ್ ಮನಷ್ಯಾನ ಬಂದ ಪಾಲಿಸಿ ಕೇಳಲಿಕತ್ತಾನ ಇಲ್ಲಾ ಅಂದರ ಹೆಂಗ ಅಂತ ಹೆದರಿ ಒಂದರ ಪಾಲಿಸಿ ಮಾಡಸ್ತಿದ್ವಿ ಅನ್ನರಿ. ಹಿಂಗ ನನ್ನ ಒಂದನೇ ಪಾಲಿಸಿ ಹುಟ್ಟತ..ಹುಟ್ಟಿ ತಿರಗಿ ಇಪ್ಪತ್ತೈದ ವರ್ಷ ಆಗಿ ಮ್ಯಾಚುರನೂ ಆತ ಅನ್ನರಿ.
ಮುಂದ ಪಗಾರ ಜಾಸ್ತಿ ಆದಾಗೊಮ್ಮೆ ಹೊಸಾ ಪಾಲಿಸಿ ಕೇಳ್ತಿದ್ದಾ. ಅದರಾಗ ನಮ್ಮವ್ವ
’ಕುಂಬಾರವರು ಪಾಲಿಸಿ ಕೇಳಿದರ ಇಲ್ಲಾ ಅನಬ್ಯಾಡಾ’ ಅಂತ standing instruction ಕೊಟ್ಟಿದ್ಲು. ಅಲ್ಲಾ, ನಮ್ಮವ್ವಗ ನಾ ಲಗ್ನ ಆದ ಮ್ಯಾಲೆ ಬರೇ ಹೆಂಡ್ತಿಗೆ ನಾಮಿನೀ ಮಾಡ್ತೇನಿ ಅಂತ ಗ್ಯಾರಂಟಿ ಇತ್ತ ಕಾಣ್ತದ ಅದಕ್ಕ ಈಗ ಪಾಲಿಸಿ ಮಾಡಿಸಿದರ ತಾ ನಾಮಿನೀ ಆಗ್ತೇನಿ ಅಂತ ಅಕಿ ವಿಚಾರ ಇತ್ತ. ಹಂಗ ಪಾಪ ನಮ್ಮವ್ವಗ ನಾಮಿನೀ ಅಂದರ ಏನು, ಅದರ ಫಾಯದೇ ಏನೂ ಅಂತ ಒಂದ ಚೂರು ಗೊತ್ತ ಇರಲಿಲ್ಲ ಬಿಡ್ರಿ, ಒಟ್ಟ LIC Bond ಒಳಗ ಅಕಿ ಹೆಸರ typed ಬರ್ತದ ಅಂತ ನಂಗ ಪಾಲಿಸಿ ಮಾಡಸ ಅಂತ ಗಂಟ ಬಿಳ್ತಿದ್ಲು. ಅದರಾಗ ನಮ್ಮ ದೋಸ್ತ ಕುಂಬಾರ ಏನ ಇದ್ದನಲಾ ಅಂವಾ ಅಗದಿ ದೇವರ ಹಂತಾ ಮನಷ್ಯಾ. ವರ್ಷಕ್ಕ ಜೀವಾ ತಿಂದ ಮೂರ ನಾಲ್ಕ ಪಾಲಿಸಿ ಕೇಳ್ತಿದ್ದಾ ಅನ್ನೋದ ಬಿಟ್ಟರ ಬ್ಯಾರೆ ನಮಗ ಏನ ಪ್ರಾಬ್ಲೇಮ್ ಇದ್ದರು ಅಗದಿ ಆಪದ್ಭಾಂಧವ ಇದ್ದಂಗ ಇದ್ದಾ. A true friend in all sense. ಅಗದಿ ಮನಿ ಮಂದಿಕಿಂತಾ ಜಾಸ್ತಿ ಹಚಗೊಂಡ ಹೆಲ್ಪ ಮಾಡ್ತಿದ್ದಾ. ಯಾರಿಗೆ ಏನ ಕ್ರೈಸಿಸ್ ಬಂದರು ಫಸ್ಟ ನೆನಪ ಆಗೋದ ಕುಂಬಾರಂದ.
ಹಿಂಗ ಅಂವಾ ಮಂದಿಗೆ ಹಚಗೊಂಡಿದ್ದಾ ಅಂತ ವರ್ಷಾ ಕೋಟ್ಯಾದೀಶ್ ಆಗ್ತಿದ್ದ…ಪಾಲಿಸಿ ಒಳಗ ಕೋಟ್ಯಾದೀಶ ಆಗ್ತಿದ್ದನ ಮತ್ತ. ಅರ್ಧಕ್ಕಾ ಅರ್ಧಾ ಮಂದಿ ಅವನ ಸರ್ವೀಸ ನೋಡಿನ ಅವಂಗ ಪಾಲಿಸಿ ಕೊಡ್ತಿದ್ದರು. ಆವಾಗ ಈಗಿನಗತೆ ಪ್ರೈವೇಟ ಇನ್ಸುರೇನ್ಸ್ ಇರಲಿಲ್ಲಾ. LIC ಅಂದರ ನಮಗ not only insurance but also savings ಇದ್ದಂಗ ಇತ್ತ. ನಮ್ಮಂತಾ ಮಿಡಲ್ ಕ್ಲಾಸ ಫ್ಯಾಮಿಲಿಗೆ LIC ಬ್ಯಾಕ್ ಬೋನ್ ಇದ್ದಂಗ ಬಿಡ್ರಿ ಸುಳ್ಳ ಯಾಕ ಹೇಳ್ಬೇಕ.
ನೋಡ್ರಿ ಅವತ್ತ ಅವನ ಕಾಟಕ್ಕ ಮಾಡಿಸಿದ್ದ ಪಾಲಿಸಿ ಇವತ್ತ ಹೆಂತಾ ಹೊತ್ತಿನಾಗ ಕೈಹಿಡಿತ ಅಂತೇನಿ.
ಮುಂದ ನನ್ನ ಮದ್ವಿ ಆದಮ್ಯಾಲೆ ನನ್ನ ಹೆಂಡ್ತಿ ಪಾಲಿಸಿಗೆ ಗಂಟ ಬಿದ್ದಾ. ನಾ ಎಷ್ಟ ಒಲ್ಲೇ ಅಂದರೂ
’ಲೇ…ಈ ಸರತೆ ನೀನ ನಾಮಿನೀ ಮಗನ’ ಅಂತ ನಂಗ ಆಶಾ ಹಚ್ಚಿ ಹಚ್ಚಿ ಪಾಲಿಸಿ ಮಾಡಸ್ತಿದ್ದಾ. ಹಂಗ ಖರೇ ಅಂದರ ಅವಂಗ ಯಾರ ನಾಮಿನೀ ಆದರೂ ಫರಕ ಬಿಳ್ತಿದ್ದಿಲ್ಲಾ, ಅವಂಗ ಒಂದ ಪಾಲಿಸಿ ಸಿಗ್ತಿತ್ತ ಇಷ್ಟ.
ಮೊನ್ನೆ ’ನಂದ ಒಂದನೇ ಪಾಲಿಸಿ, ನೀ ನಾಮಿನೀ ಇದ್ದದ್ದ ಮ್ಯಾಚುರ್ ಆತ’ ಅಂತ ನಮ್ಮವ್ವಗ ಅಂದಾಗ ಅಕಿ ಫಸ್ಟ ನೆನಿಸಿದ್ದ ನಮ್ಮ ದೋಸ್ತ ಕುಂಬಾರನ್ನ. ಪಾಪ ಇವತ್ತ ಅಂವಾ ಇಲ್ಲಾ ಖರೆ ಆದರ ಅಗದಿ ಪ್ರಾತಃಸ್ಮರಣೀಯ ಮನಷ್ಯಾ ಬಿಡ್ರಿ.
ಇನ್ನ ಯಾವಾಗ ನನ್ನ ಪಾಲಿಸಿ ಮ್ಯಾಚುರ್ ಆಗಿ ನಂಗ ಅರವತ್ತ ಸಾವಿರ ಬಂತಲಾ ಆವಾಗ ನನ್ನ ಹೆಂಡ್ತಿಗೆ ತಡ್ಕೊಳಿಕ್ಕೆ ಆಗಲಿಲ್ಲಾ, ತನ್ನ ಪಾಲಿಸಿದು ನೆನಪಾಗಿ ಒಮ್ಮಿಂದೊಮ್ಮಿಲೇ
’ಅನ್ನಂಗ ನನ್ನ ಪಾಲಿಸಿ ಯಾವಾಗ ಮ್ಯಾಚುರ್ ಆಗ್ತದ ನೋಡ್ರಿ’ ಅಂತ ಕೇಳಿದ್ಲು.
ನನಗ ಒಮ್ಮಿಕ್ಕಲೇ ಅಕಿ ನನ್ನ ಪಾಲಿಸಿ ಮ್ಯಾಚುರ್ ಆಗೇದ ಅಂದಾಗ ’ನಿಮ್ಮ ಪಾಲಿಸಿ ಮ್ಯಾಚುರ್ ಆತ ಇನ್ನ ನೀವ ಯಾವಾಗ ಮ್ಯಾಚುರ್ ಆಗ್ತೀರಿ’ ಅಂದದ್ದ ನೆನಪಾತ ಅದಕ್ಕ ನಾ ಅಕಿಗೆ..
’ಏ…ಹೇಲೊ…ನಿನ್ನ ಪಾಲಿಸಿನೂ ನಿನ್ನಂಗ… ಅದ ಈ ಜನ್ಮದಾಗ ಮ್ಯಾಚುರ್ ಆಗಂಗಿಲ್ಲಾ ತೊಗೊ’ ಅಂತ ನಾ ಅಂದ ಸೇಡ ತಿರಿಸ್ಕೊಂಡೆ. ಅಕಿ ಯಾಕ ಅಂತ ಕೇಳಿದ್ದಕ್ಕ ನಾ
’ಲೇ..ನಿನ್ನ ಪಾಲಿಸಿ ಎಲ್ಲಾ ಟರ್ಮ್ ಇನ್ಸುರೇನ್ಸ್ ಅವ ತೊಗೊ, ಅವ ಡೈರೆಕ್ಟ ನಾಮಿನೀಗೆ ಬರೋವ ಹೊರತು ಪಾಲಿಸಿ ಯಾರ ಹೆಸರಲೇ ಅದ ಅವರಿಗೇನ ಅಲ್ಲಾ’ ಅಂತ ಹೇಳಿ ಟಾಪಿಕ್ ಕ್ಲೋಸ್ ಮಾಡಿದೆ.
ಹಂಗ ಇವತ್ತ ಎಲ್ಲಾ ಬಿಟ್ಟ LIC ಬಗ್ಗೆ ಯಾಕ ವಿಷಯ ಬಂತಪಾ ಅಂದರ ಮೊನ್ನೆ ಒಂದನೇ ತಾರೀಕಿಗೆ LIC Day ಇತ್ತ. ಇನ್ನ ಹಿಂತಾ ಕೊರೋನಾ ಕಷ್ಟ ಕಾಲದಾಗ ಆಪದ್ಭಾಂಧವ ಆಗಿ ಅಗದಿ ರೈಟ ಟೈಮ ಒಳಗ LIC ಪಾಲಿಸಿ ಮ್ಯಾಚುರ್ ಆಗಿದ್ದಕ್ಕ ಇಷ್ಟ ಬರಿಬೇಕಾತ.
ಜೀವನದಾಗ ನಾವ ಮ್ಯಾಚುರ್ ಆಗಲಿ ಬಿಡಲಿ, ಪಾಲಿಸಿ ನಾವ ಇದ್ದಾಗ ಮ್ಯಾಚುರ್ ಆಗೋದ ಇಂಪಾರ್ಟೇಂಟ್ ….ಹೌದಲ್ಲ ಮತ್ತ?

One thought on “ನಿಮ್ಮ ಪಾಲಿಸಿ ಮ್ಯಾಚುರ್ ಆತ ನೀವು ಯಾವಾಗ ಆಗ್ತೀರಿ?

  1. ಭಾಳ್ ಚೆಂದ ಬರದಿರಿ. ನಾನು ಕಿರ್ಲೊಸಕರ್ ವಾರ್ನರ್ ನಲ್ಲಿ ಕೆಲಸ ಮಾಡಿದ್ದು, ನನ್ನ ಕಂಪನಿ ಒಳಗೂ ಒಬ್ಬ ಇದ್ದ. ಅವನೂ ಪೆರ್ಸನಲ್ ಡಿಪಾರ್ಟ್ಮೆಂಟ್. ನೋಡಲಿಕ್ಕೆ ಅಜಾನಬಾಹು. ನೋಡಿದ್ರ ಹೆದರಿಕೆ ಬರೂಹಂಗ್. ಅವ ಕೇಳಿದಕೂಡಲೇ 20000 ಪಾಲಿಸಿ ಕೊಟ್ಟಿದ್ದೆ. ಮೊನ್ನೆ ಮೊನ್ನೆ mature ಆತು.
    ಭಾಳ್ ಲಗು connect ಅಗತದ್ ಈ ಲೇಖನ.
    ಕ್ರತಜ್ಞತೆಗಳು

Leave a Reply

Your email address will not be published. Required fields are marked *

About Me

ಹುಟ್ಟಿದ್ದು 1973, ಅಕ್ಟೋಬರ 13ಕ್ಕ. ಹೆಸರಿಗೆ ಹುಟ್ಟಿದ್ದ ಶಿವಮೊಗ್ಗಾ ಆದರು, ಬೆಳದಿದ್ದು-ಬಲತಿದ್ದು-ಕಲತಿದ್ದು- ಕಳತಿದ್ದು (ಪಕ್ವವಾಗಿದ್ದು) ಎಲ್ಲಾ ಹುಬ್ಬಳ್ಳಿ ಒಳಗ, ಕಲತಿದ್ದು ಬಿ.ಏಸ್ಸಿ, ಕೋತಂಬರಿ ಕಾಲೇಜ ಹುಬ್ಬಳ್ಳಿ ಒಳಗ ಮುಂದ ಎಮ್.ಬಿ.ಎ (ಸಿಂಬಾಯ್ಸಿಸ್- ಪೂಣೆ). ಸದ್ಯೇಕ...

Follow me on Facebook

ನನ್ನ ಸಂಪೂರ್ಣ ಪ್ರೊಫೈಲ್ ವೀಕ್ಷಿಸಿ