ನೀ ಹಡಿಯೋದ ಹೆಚ್ಚೊ ..ನಾವ ಕರಿ ಎರಿಯೋದ ಹೆಚ್ಚೊ….

ಇದ ಅಗದಿ ಒಂದ 23 ವರ್ಷದ ಹಿಂದಿನ ಕಥಿ ಅನ್ನರಿ, ರಥಸಪ್ತಮಿ ದಿವಸ ಮುಂಜಾನೆ ನಮ್ಮ ಓಣ್ಯಾಗಿನ ಜೋಶಿ ಅಂಟಿ ಬಂದ ನಮ್ಮವ್ವಗ
’ಸಂಜಿಗೆ ನಮ್ಮ ಮೊಮ್ಮಗಗ ಕರಿ ಎರಿತೇವಿ, ನೀವು ಮತ್ತ ನಿಮ್ಮ ಸೊಸಿ ಇಬ್ಬರು ಸೇರಿ ಅರಿಷಣ-ಕುಂಕಮಕ್ಕ ಬರ್ರಿ…ಸೊಸಿನ್ನ ಮರಿ ಬ್ಯಾಡ್ರಿ ಮತ್ತ, ಹೊಸಾ ಸೊಸಿ ಇದ್ದಾಳ ಓಣ್ಯಾಗ ನಾಲ್ಕ ಮಂದಿಗೆ ಅಕಿದ ವೈವಾಟ ಆಗ್ಲಿ’ ಅಂತ ಹೇಳಿ ಹೋಗಿದ್ದರು. ಅವರ ಕರಿಲಿಕ್ಕೆ ಬಂದಾಗ ನಮ್ಮಕಿ ಸ್ನಾನಕ್ಕ ಹೋಗಿದ್ಲು.
ಇನ್ನ ನಮ್ಮಕಿ ಸ್ನಾನಕ್ಕ ಹೋದ್ಲ ಅಂದರ ಮುಗಿತ, ತಾಸ ಗಟ್ಟಲೇ ಹೋಗ್ತಾಳ, ಅದಕ್ಕ ಅಕಿ ಸ್ನಾನಕ್ಕ ನಮ್ಮ ಪೈಕಿ ಜನಾ ’ಉರ್ಮಿಳಾನ ಸ್ನಾನ’ ಅಂತ ಇವತ್ತಿಗೂ ಕಾಡಸ್ತಾರ.
ಅಲ್ಲಾ ’ನಮಗ ಪ್ರೇರಣಾ ಗೊತ್ತ ಇತ್ತ, ಉರ್ಮಿಳಾ ಯಾರ ’ ಅಂತ ಅನ್ನೋರ ಯಾರರ ಇದ್ದರ ಅವರಿಗೆ ಹೇಳ್ತೇನಿ, ಈ ಉರ್ಮಿಳಾ ಏನ ಇದ್ದಾಳಲಾ ಇಕಿ ತ್ರೇತಾಯುಗದಾಗ ಅಂದರ ರಾಮಾಯಣದಾಗ ಲಕ್ಷ್ಮಣನ ಹೆಂಡ್ತಿ. ಲಕ್ಷ್ಮಣ ವನವಾಸಕ್ಕ ಹೋಗಬೇಕಾರ ಅಕಿನ್ನ ಬಿಟ್ಟ ಹೋಗಿದ್ದಕ್ಕ ಅಕಿ ಹದಿನಾಲ್ಕ ವರ್ಷ ಬಚ್ಚಲದಾಗ ಇದ್ದಳಂತ ಹೇಳ್ತಾರ. ಹಿಂಗಾಗಿ ಇವತ್ತಿಗೂ ಯಾರರ ತಾಸ ಗಟ್ಟಲೇ ಸ್ನಾನಕ್ಕ ಹೋದರ ಅದಕ್ಕ ’ಉರ್ಮಿಳಾನ ಸ್ನಾನ’ ಅಂತ ಕರಿತಾರ. ಹಂಗ ನಮ್ಮಕಿದ ಈ ’ಉರ್ಮಿಳಾ ಸ್ನಾನ’ದ ಬಗ್ಗೆ ನಾ ’ನಳಾ ಹೋತ ಇನ್ನರ ಯರಕೋಳೊದ ಮುಗಸ ’ ಅಂತ ಒಂದ ಆರ್ಟಿಕಲ್ ಬರದೇನ ಬಿಡ್ರಿ ಈಗ ಆ ಮಾತ ಬ್ಯಾಡ.
ಮುಂದ ಇಕಿ ಸ್ನಾನ ಮುಗಿಸಿಗೊಂಡ ಬಂದ ಮ್ಯಾಲೆ ನಮ್ಮವ್ವಾ ’ಜೋಶಿ ಅವರ ಮನ್ಯಾಗ ಸಂಜಿಗೆ ಕರಿ ಎರಿತಾರಂತ ಇಬ್ಬರು ಅರಿಷಣ ಕುಂಕಮಕ್ಕ ಹೋಗೊಣ’ ಅಂತ ಹೇಳಿದ್ಲು. ಆವಾಗ ನಮ್ಮವ್ವಗೂ ಹೊಸಾ ಸೊಸಿ ಹಿಂಗಾಗಿ ಯಾರ ಕರದರು ಅಗದಿ ಅತ್ತಿ ಸೊಸಿ ಜೋಡಿಲೇ ಹೋಗ್ತಿದ್ದರು. ಮ್ಯಾಲೆ ಹೋದಲ್ಲೆ-ಬಂದಲ್ಲೇ ನಮ್ಮವ್ವ ಇಕಿನ ನಮ್ಮ ಹೊಸಾ ಸೊಸಿ ಅಂತ ಪರಿಚಯ ಮಾಡ್ಸೋಕಿ. ಲಾಜಿಕ್ ಇದ್ದವರ ಇವರಿಗೆ ಹಳೇ ಸೊಸಿ ಬ್ಯಾರೆ ಇದ್ಲೇನ ಅಂತ ತಿಳ್ಕೋಬೇಕ ಹಂಗ.
ಸಂಜಿ ಮುಂದ ಇಬ್ಬರು ಅತ್ತಿ ಸೊಸಿ ಅಗದಿ ಮ್ಯಾಚಿಂಗ್ ಸಿರಿ ಉಟಗೊಂಡ ರೆಡಿ ಆಗಿ ಕರಿ ಎರಿಲಿಕ್ಕೆ ಹೋದರು. ಇವರ ಹೋಗೊದರಾಗ ಜೋಶಿಯವರ ಸೊಸಿ ತನ್ನ ಮಗನ ತೊಡಿ ಮ್ಯಾಲೆ ಕೂಡಿಸ್ಗೊಂಡ ಕೂತಿದ್ಲು. ಕರಿ ಎರೆಯೋ ಕಾರ್ಯಕ್ರಮ ಆತ. ಆ ಹುಡಗನ ಮುಂದ ಓಣ್ಯಾಗಿನ ಒಂದ ನಾಲ್ಕ ಹುಡಗರು ಕೂತೋರ ಅವರ ಕರಿ ಎರದಾಗ ಬಿದ್ದ ಹಣ್ಣು, ಬೆಂಡು-ಬೆತ್ತಾಸ, ಕಬ್ಬಿನ ತುಂಡು ಎಲ್ಲಾ ಅಗದಿ ಜಗಳಾಡ್ಕೋತ ಆರಿಸ್ಗೊಂಡರು. ಹಂಗ ಆ ಹುಡುಗರು ಕರಿ ಎರದಿದ್ದ ಸಾಮಾನ ಒಬ್ಬರಿಗೊಬ್ಬರ ಆರಿಸ್ಗೋ ಬೇಕಾರ ಪಾಪ ನನ್ನ ಹೆಂಡ್ತಿಗೆ ತಾನೂ ಹೋಗಿ ಆರಿಸ್ಗೊಬೇಕ ಅಂತ ಜೀವಾ ಚುಟು-ಚುಟು ಅನ್ನಲಿಕತ್ತಿತ್ತ ಆದರ ಏನ್ಮಾಡೋದ ಈಗ ಅಕಿ ಸಣ್ಣ ಹುಡುಗಿ ಆಗಿ ಉಳದಿದ್ದಿಲ್ಲಾ, ನನ್ನ ಲಗ್ನಾ ಮಾಡ್ಕೊಂಡಿದ್ಲಲಾ.
ಮುಂದ ವಾಪಸ ಮನಿಗೆ ಬರಬೇಕಾರ ಅಕಿ ನಮ್ಮವ್ವಗ
’ಅತ್ಯಾ ಮತ್ತ ಇವತ್ತ ರಥಸಪ್ತಮಿಗೆ ನನಗ ಯಾಕ ಕರಿ ಎರಿಲಿಲ್ಲಾ?’ ಅಂತ ಕೇಳಿದ್ಲು . ನಮ್ಮವ್ವಗ ಗಾಬರಿ ಆತ.
’ಏ..ಅದ ಸಣ್ಣ ಹುಡುಗರಿಗೆ ಇಷ್ಟನ ನಮ್ಮವ್ವಾ…ಐದ ವರ್ಷದ ಒಳಗಿನವರಿಗೆ ಇಷ್ಟ ಕರಿ ಎರಿತಾರ, ಯಾಕ ನೀ ಸಣ್ಣಕಿದ್ದಾಗ ನಿಮ್ಮವ್ವಾ ನಿಂಗ ಕರಿ ಎರದಿಲ್ಲೇನ’ ಅಂತ ಕೇಳಿದ್ಲು.
’ನಾ ಸಣ್ಣ ಹುಡುಗರಿಗೆ ಸಂಕ್ರಮಣಕ್ಕ ಕರಿ ಎರಿತಾರ, ಹೊಸಾ ಸೊಸಿಗೆ ರಥಸಪ್ತಮಿಗೆ ಕರಿ ಎರಿತಾರ ಅಂತ ತಿಳ್ಕೊಂಡಿದ್ದೆ’ ಅಂತ ಇಕಿ ಅಂದ್ಲು.
’ಏ, ಸಣ್ಣ ಹುಡುಗರಿಗೆ ಒಂದನೇ ಸರತೆ ಕರಿ ಎರಿಯೋದ ಇತ್ತಂದರ ರಥಸಪ್ತಮಿಗೆ ಎರಿತಾರ. ಮುಂದ ಐದ ವರ್ಷದ ತನಕ ಸಂಕ್ರಮಣದ ಕರಿಗೆ ಕರಿ ಎರ್ಕೋತ ಹೋಗ್ತಾರ…ನಮ್ಮಲ್ಲೇ ಎಲ್ಲೇನೂ ಸೊಸಿಗೆ ಕರಿ ಎರಿಯೋ ಪದ್ದತಿ ಇಲ್ಲಾ…’ ಅಂತ ನಮ್ಮವ್ವ ಹಣಿ-ಹಣಿ ಬಡ್ಕೊಂಡ ತಿಳಿಸಿ ಹೇಳಿ ಮತ್ತ ಮ್ಯಾಲೆ
’ಆ ಜೋಶಿಯವರ ಕೂಸ ಈಗ ದಣೇಯಿನ ಐದ ತಿಂಗಳದ್ದ ಅದ ಅಂತ ಆ ಹುಡಗನ್ನ ಕರಕೊಂಡ ಅವರವ್ವ ಕೂತಿದ್ಲ. ಕರಿ ಎರದಿದ್ದ ಆ ಕೂಸಿಗೆ, ಅವರವ್ವಗಲ್ಲಾ. ನೀ ಏನ ಕೂಸಿನ ಜೊತಿ ತಾಯಿಗೂ ಎರಿತಾರ ಅಂತ ತಿಳ್ಕೊಂಡಿ ಏನ. ಹಂಗ ನಿನಗ ಕರಿ ಎರಿಸ್ಗೊಬೇಕ ಅಂತ ಆಶಾ ಇದ್ದರ ಹಡದರ ಹಡಿ ನಿನಗೂ ಕರಿ ಎರಿತೇವಿ. ನೀ ಹಡಿಯೋದ ಹೆಚ್ಚೊ ನಾವ ಕರಿ ಏರಿಯೋದ ಹೆಚ್ಚೊ ಅಂದ್ಲು.
ಮುಂದ ನನ್ನ ಹೆಂಡ್ತಿಗೆ ಕರಿ ಎರೆಯೋದರ ಬಗ್ಗೆ ದಾರಿಗುಂಟ
’ಹಂಗ ಕರಿ ಎರಿಯೋದ ಅಂದರ ಎಳ್ಳ ಎರಿಯೋದ. ಒಂದಿಷ್ಟ ಮಂದಿ ಇದನ್ನ ಹಣ್ಣ ಎರೆಯೋದು ಅಂತನೂ ಕರಿತಾರ. ಇದನ್ನ ನಾರ್ಮಲಿ ಸಂಕ್ರಾಂತಿ ಕರಿ ದಿವಸ ಮಾಡ್ತಾರ. ನಾವ ಹೆಂಗ ಸಂಕ್ರಾಂತಿಗೆ ನದಿ, ಹಳ್ಳ, ಸಮುದ್ರ ಇದ್ದಲ್ಲಿ ಕರಿ ದಿವಸ ಸ್ನಾನಕ್ಕ ಹೋಗ್ತೇವಲಾ ಹಂಗ ಸಣ್ಣ ಹುಡುಗರಿಗೆ ಎಳ್ಳ ಎರಿತಾರ. ಎಳ್ಳನೂ ನದಿ ನೀರಿನ ಹಂಗ ಪವಿತ್ರ ಅಂತಾರ. ಹಿಂಗ ಎಳ್ಳ ಜೊತಿ ಕೊಬ್ಬರಿ, ಹಣ್ಣು, ಬೆಂಡು ಬೆತ್ತಾಸ, ಕಬ್ಬಿನ ತುಂಡು, ಒಂದ್ಯಾರಡ ನಾಲ್ಕಣೆ-ಎಂಟಣೆ ಬಿಲ್ಲಿ, ಒಂದ-ಎರಡ ಹವಳ-ಮುತ್ತು ಎಲ್ಲಾ ಹಾಕಿ ಎರಿತಾರ. ಮ್ಯಾಲೆ ಆ ಕೂಸು ಮತ್ತ ತಾಯಿ ಕರಿ ಅರಬಿ ಹಾಕೊಬೇಕು’ ಅಂತ ಎಲ್ಲಾ ಇಕಿ ಡಿಟೇಲ್ಸ್ ಹೇಳಿದ್ಲು.
ನಮ್ಮವ್ವಾ ಅಷ್ಟಕ್ಕ ಬಿಡ್ಲಿಲ್ಲಾ ಮನಿಗೆ ಬಂದೋಕಿನ ನನಗ
’ನಿನ್ನ ಹೆಂಡ್ತಿಗೆ ಕರಿ ಎರಿಬೇಕಂತ ನೋಡಪಾ, ಲಗೂನ ಒಂದ ಹಡದರ ಹಡಿ’ ಅಂತ ನನಗ ಅಂದ್ಲು.
ನಾ ನನ್ನ ಹೆಂಡ್ತಿಗೆ ಕರಿ ಎರಿಬೇಕ ಅಂದದ್ದ ಕೇಳಿ ಆಶ್ಚರ್ಯ ಆತ, ಮತ್ತೇಲ್ಲರ ಇಕಿಗೆ ಕರಿ ಎರಿಸ್ಗೊಬೇಕ ಅಂತ ಬಯಕಿ ಹತ್ತೇದೆನ ಅಂತ ಸೈಡಿಗೆ ಕರದ ’ಏನರ ವಿಶೇಷ ಅದ ಏನ?’ ಅಂತ ಕೇಳಿದೆ.
’ಏ..ಹೊಗರಿ ಎಲ್ಲೀದ….ನಾ ಮೊನ್ನೇನ ಯರಕೊಂಡೇನಿ’ ಅಂತ ನಂಗ ಜೋರ ಮಾಡಿದ್ಲು.
ಇತ್ತಲಾಗ ನಮ್ಮವ್ವಂದು ಕರಿ ಎರೆಯೋದರ ಕಥಿ ಮನಿಗೆ ಬಂದರೂ ನಿಲ್ಲಲಿಲ್ಲಾ. ಅಕಿ ಫ್ಲ್ಯಾಶ್ ಬ್ಯಾಕಿಗೆ ಹೋಗಿ
’ಪ್ರಶಾಂತಗ ಒಂದ ಸರತೆ ಕರಿ ಎರಿಬೇಕಾರ ಶಾಸ್ತ್ರಕ್ಕ ಹವಳ ಹಾಕಿದ್ದ ನಮ್ಮ ಮನಿ ಬಾಜು ಹುಡುಗಿ ಒಬ್ಬೋಕಿ ಈ ಹಣ್ಣು, ಕಡ್ಲಿ ಆರಿಸ್ಗೊಂಡ ಗಬಕ್ಕನ ಬಾಯಾಗ ತುರಕೊ ಗಡಬಿಡಿ ಒಳಗ ನುಂಗಿ ಬಿಟ್ಟಿದ್ಲವಾ, ನನಗರ ಹವಳ ಹೋತಲಾ ಅಂತ ಒಂದ ಕಡೆ ಇನ್ನೊಂದ ಕಡೆ ಆ ಹುಡಗಿಗೆ ಏನರ ಆದರ ಏನ ಗತಿ ಅಂತ ಚಿಂತಿ ಹತ್ತಿತ್ತ. ಮತ್ತ ರಾತ್ರೊ ರಾತ್ರಿ ದೇವಳೆ ಡಾಕ್ಟರ ಕಡೆ ಕರ್ಕೊಂಡ ಹೋಗಿದ್ವಿ. ಅವರ ಏನ ಚಿಂತಿ ಮಾಡಬ್ಯಾಡ್ರಿ ನಾಳೆ ಮುಂಜಾನೆ ವಾಪಸ ಬರ್ತದ ಅಂದ ಮ್ಯಾಲೆ ನಂಗ ಸಮಾಧಾನ ಆತ್ವಾ ಅಂತ ಒಂದ ಕಥಿ ಹೇಳಿದ್ಲು.
ಇನ್ನೊಮ್ಮೆ ನಮ್ಮ ತಂಗಿಗೆ ಕರಿ ಎರಿಬೇಕಾರ ಹವಳ-ಮುತ್ತು-ಬಂಗಾರ ಎಲ್ಲಾ ಇರ್ತದ ಅಂತ ನಮ್ಮವ್ವ ಶಾಣ್ಯಾತನ ಮಾಡಿ ತನ್ನ ಕಿವ್ಯಾಗಿನ ಫಿರಕಿ ಬೆಂಡ್ವಾಲಿ ಹಾಕಿ ಕರಿ ಎರದಿದ್ಲು, ಅದ ಯಾರಿಗೆ ಸಿಗ್ತದ ಅವರ ವಾಪಸ್ಸ ಕೊಡ ಅಂತ ಮೊದ್ಲ ಹೇಳಿದ್ಲ ಖರೆ ಆದರ ಮುಂದ ಕರಿ ಎರದ ಮ್ಯಾಲೆ ಅದರ ಕಡೆ ಲಕ್ಷನ ಇರಲಿಲ್ಲಾ ,ಮರತ ಬಿಟ್ಟದ್ಲು. ಮುಂದ ಎಲ್ಲಾರೂ ಮನಿಗೆ ಹೋದ ಮ್ಯಾಲೆ ನೆನಪಾತ. ಇನ್ನ ಯಾರಿಗಂತ ಕೇಳೊದ ಹೆಂಗ ಕೇಳೊದ ಅಂತ ಚಿಂತಿ ಹತ್ತಿ ಎಲ್ಲಾ ಹುಡುಗರ ಮನಿಗೆ ಹೋಗಿ-ಹೋಗಿ ಕೇಳ್ಕೊಂಡ ಬಂದ್ಲು. ಪಾಪ ಯಾ ಹುಡುಗರು ನಾವ ತೊಗೊಂಡಿಲ್ಲಾ ಅಂತ ಅಂದರು. ನಾ ’ಯಾರರ ನುಂಗಿರಬೇಕ ತೊಗೊ ನಾಳೆ ಬರ್ತದ’ ಅಂತ ಅಂದ ’ಲೇ…ಹುಚ್ಚಾ ಹವಳ ಸ್ಮೂಥ ಇತ್ತ ಬಂತ, ಕಿವ್ಯಾಗಿನ ಫಿರಕಿ ಬೆಂಡವಾಲಿ ಹೆಂಗ ಬರ್ತದ, ಎಲ್ಲಿಂದ ಬರ್ತದ’ ಅಂತ ಬೈಸ್ಗೊಂಡಿದ್ದೆ. ಕಡಿಕೆ ಮನ್ಯಾಗ ಹಾಸಿದ್ದ ಜಮಖಾನಿ ಮತ್ತೊಮ್ಮೆ ಝಾಡಿಸಿ ನೋಡಿದಾಗ ಆ ಬೆಂಡ್ವಾಲಿ ಜಮಖಾನಿ ಅಂಚಿನಾಗಿನ ಗೊಂಡೆಕ್ಕ ಸಿಕ್ಕೊಂಡಿತ್ತ. ಏನ್ಮಾಡ್ತೀರಿ? ಇದ ನಮ್ಮವ್ವನ ಕರಿ ಎರೆಯೋ ಪುರಾಣ.
ಅದ ಇರಲಿ ನಿನ್ನ ಹೆಂಡ್ತಿಗೆ ಕರಿ ಎರಿಯೋದ ಎಲ್ಲಿಗೆ ಬಂತ ಅಂತ ಕೇಳೊರಿಗೆ ಹೇಳ್ಬೇಕಂದರ ಮುಂದ ಕರೆಕ್ಟ ಎರಡ ವರ್ಷ ಆದಮ್ಯಾಲೆ ರಥಸಪ್ತಮಿ ದಿವಸ ಜರತಾರಿ ಕರಿ ಸೀರಿ ಕೊಡಸಿಸಿ, ನನ್ನ ಮಗಗ ಒಂದ ಕರಿ ಚೈನಾ ಸಿಲ್ಕ ಅಂಗಿ ಹಾಕಿ ಅಕಿ ತೊಡಿಮ್ಯಾಲೆ ಕೂಡಿಸಿ ಕರಿ ಎರದ್ವಿ ಬಿಡ್ರಿ.
ಇರಲಿ ಇವತ್ತ ರಥಸಪ್ತಮಿ ಸಂಜಿಗೆ ಯಾರದರ ಮನ್ಯಾಗ ಕರಿ ಎರಿಯೊದಿದ್ದರ ಹೇಳ್ರಿ, ನಮ್ಮಕಿನ ಕಳಸಿ ಕೊಡ್ತೇನಿ. ಬೆಂಡು-ಬೆತ್ತಾಸ- ಬೆಂಡ್ವಾಲಿ ಆರಿಸಿಗೊಳ್ಳಿಕ್ಕೆ.

One thought on “ನೀ ಹಡಿಯೋದ ಹೆಚ್ಚೊ ..ನಾವ ಕರಿ ಎರಿಯೋದ ಹೆಚ್ಚೊ….

  1. Fantastic! You took me down my memory lane, in a flash, I travelled down to 1958-59 when I was a young boy, and never missed such opportunities of “Kari Yereyodu” to pick up as much of fruit pieces and coins as possible.

Leave a Reply

Your email address will not be published.

This site uses Akismet to reduce spam. Learn how your comment data is processed.

About Me

ಹುಟ್ಟಿದ್ದು 1973, ಅಕ್ಟೋಬರ 13ಕ್ಕ. ಹೆಸರಿಗೆ ಹುಟ್ಟಿದ್ದ ಶಿವಮೊಗ್ಗಾ ಆದರು, ಬೆಳದಿದ್ದು-ಬಲತಿದ್ದು-ಕಲತಿದ್ದು- ಕಳತಿದ್ದು (ಪಕ್ವವಾಗಿದ್ದು) ಎಲ್ಲಾ ಹುಬ್ಬಳ್ಳಿ ಒಳಗ, ಕಲತಿದ್ದು ಬಿ.ಏಸ್ಸಿ, ಕೋತಂಬರಿ ಕಾಲೇಜ ಹುಬ್ಬಳ್ಳಿ ಒಳಗ ಮುಂದ ಎಮ್.ಬಿ.ಎ (ಸಿಂಬಾಯ್ಸಿಸ್- ಪೂಣೆ). ಸದ್ಯೇಕ...

Follow me on Facebook

ನನ್ನ ಸಂಪೂರ್ಣ ಪ್ರೊಫೈಲ್ ವೀಕ್ಷಿಸಿ