ಈ sensex ಮಾರಿ nifty ತೊಗೊರಿ…..

ಮೊನ್ನೆ ನಮ್ಮ ದೋಸ್ತ ಪಕ್ಕೂನ ಹೆಂಡ್ತಿ ಒಂದ ಮದ್ವ್ಯಾಗ ಭೆಟ್ಟಿ ಆಗಿದ್ಲು, ನಾ ಹಂಗ ಸಹಜ
’ಯಾಕ ನಿನ್ನ ಗಂಡ ಬಂದಿಲ್ಲಾ ಮದ್ವಿಗೆ’ ಅಂತ ಕೇಳಿದ್ದ ತಪ್ಪಾತ ನೋಡ್ರಿ ಅಕಿ ಗಂಡನ ಪುರಾಣ ಚಾಲು ಮಾಡೇ ಬಿಟ್ಟಳು.
’ಯಪ್ಪಾ, ಏನಪಾ ನಿನ್ನ ದೋಸ್ತ, ಮನ್ಯಾಗ ಇಂಟ್ರಾ ಡೇ ಟ್ರೇಡಿಂಗ ಮಾಡ್ಕೋತ ಕೂತಾನ. ನಾ ಖರೇ ಹೇಳ್ತೇನಿ ಜೀವನದಾಗ ಯಾರನ ಮಾಡ್ಕೊಂಡರು ಈ ಶೇರ್ ಟ್ರೇಡಿಂಗ ಮಾಡೋರನ ಮಾಡ್ಕೊಬಾರದು’ ಅಂತ ತನ್ನ ಕಥಿ ಶುರು ಮಾಡೇ ಬಿಟ್ಟಳು. ಅಲ್ಲಾ ಹಂಗ ಅಕಿ ಸಿಕ್ಕಾಗೊಮ್ಮೆ ಅದನ್ನ ಹೇಳ್ತಾಳ ಅಂತ ನಂಗೊತ್ತಿದ್ದರು ನಾ ಮತ್ತ ಕೇಳಿ ತಪ್ಪ ಮಾಡಿದೆ.
ನಮ್ಮ ಪಕ್ಕು ಶೇರ ಟ್ರೇಡಿಂಗ ಮಾಡ್ತಾನ. ಶೇರ ಸಸ್ತಾ ಇದ್ದಾಗ ತೊಗೊತಾನ ಫಾಯದೆ ಕಂಡರ ಮಾರಿಬಿಡ್ತಾನ. ಇದ ಅವನ ಕೆಲಸ, ಒಮ್ಮೆ ಮುಂಜಾನೆ ಎದ್ದ ಒಂದ ಥರ್ಮಾಸ್ ಚಹಾ, ಒಂದ ಪ್ಯಾಕ್ ಕಿಂಗ್ ಹಿಡ್ಕೊಂಡ ಟಿ.ವಿ ಮುಂದ ಎರಡ ಮೋಬೈಲ, ಒಂದ ಲ್ಯಾಂಡ ಲೈನ ಹಿಡ್ಕೊಂಡ ಕೂತನಂದರ ಮಧ್ಯಾಹ್ನ ಮೂರು ಮುವತ್ತಕ್ಕ ಟ್ರೇಡಿಂಗ ಮುಗಿಯೊತನಕ ಕುರ್ಚಿ ಬಿಟ್ಟ ಎದ್ದರ ಕೇಳ್ರಿ. ಅಲ್ಲಾ ಹಂಗ ಅಂವಾ ಅಷ್ಟರಾಗ ಮಿನಿಮಮ್ ಒಂದ ಎರಡ ಮೂರ ಸಾವಿರ ಗಳಸಿರ್ತಾನ ಮತ್ತ.
ಅವಂದ ಲೈಫ್ ಒಳಗ ಒಂದ ಫಿಲಾಸಫಿ, ಯಾ ಮನಷ್ಯಾನ ಕಡೆ ಲಿಕ್ವಿಡ್ ಕ್ಯಾಶ ಇರ್ತದ ಅವನ ಕಿಂಗ್ ಅಂತಿದ್ದಾ. ಹಿಂಗಾಗೆ ಅಂವಾ ಇವತ್ತ ಇಷ್ಟ ಗಳಸಿದರು ಸ್ವಂತ ಮನಿ, ಕಾರು ಅಂತ ಅಸೆಟ್ ಮಾಡಲಿಕ್ಕೆ ಹೋಗಿಲ್ಲಾ.
’ನಾ ಜೀವನದಾಗ ಒಂದೂ ಡೆಡ್ ಇನ್ವೆಸ್ಟಮೆಂಟ್ ಮಾಡಿಲ್ಲಾ. ಮಾಡೋದು ಇಲ್ಲಾ’ ಅಂತ ಹೇಳ್ಕೋತ ಅಡ್ಡಾಡತಾನ. ನಾ ಅವಂಗ ಕಾಡಸಲಿಕ್ಕೆ
’ಮತ್ತ..ಹೆಂಡ್ತಿಲೇ..ಅದ ಡೆಡ್ ಇನ್ವೆಸ್ಟಮೆಂಟ್ ಅಲ್ಲೇನ’ ಅಂತ ಕೇಳಿದರ
’ಏ, ಮಗನ ಅದ ಡೆಡ್ಲಿ ಇನ್ವೆಸ್ಟಮೆಂಟ್.. ನಿಂಗೇನ ತಲಿ ಗೊತ್ತ್’ ಅಂತ ನಂಗ ಅಂತಾನ. ಹಂಗ ಅಂವಾ ಹೇಳೋದ ಖರೇನ ಅನ್ರಿ.
ಅಲ್ಲಾ ಆ ಮಗಾ ಜೀವನದಾಗ ಎಲ್ಲಾನೂ ಇನ್ವಿಸ್ಟಮೆಂಟ್, ರಿಟರ್ನ್ ಆನ್ ಇನ್ವೆಸ್ಟಮೆಂಟ್, ಗ್ರೌಥ್, ಇಂಟರೆಸ್ಟ ಅಂತನ ವಿಚಾರ ಮಾಡ್ತಾನ.
ಇತ್ತಲಾಗ ಅವನ ಹೆಂಡ್ತಿ ನೋಡಿದರ ಒಂದ ಮನಿ ಕಟ್ಟಸೋಣ, ಒಂದಲ್ಲಾ ಎರಡಲ್ಲಾ, ಮೂರ ಮೂರ ಮಕ್ಕಳ ಅವ ಅವಕ್ಕರ ಅಸೆಟ್ಟ್ ಮಾಡೋಣ, ಹಿಂಗ ನೀವ ದುಡದದ್ದೇಲ್ಲಾ ಮತ್ತ ರಿ ಇನ್ವೆಸ್ಟ್ ಮಾಡ್ಕೋತ ಹೊಂಟರ ಹೆಂಗ ಅಂತ ಹೋಯ್ಕೋತಿರ್ತಾಳ ಆದರ ಅಂವಾ ಎಲ್ಲೆ ಅಕಿ ಮಾತ ಕೇಳಬೇಕ.
ನಮ್ಮಂಥಾವರ ಯಾರರ ಭೆಟ್ಟಿ ಆದರ “ನಿಮ್ಮ ದೋಸ್ತ ಈ ಜೀವನದಾಗ ಏನೂ ಅಸೆಟ್ಟ ಮಾಡಂಗಿಲ್ಲ ತೊಗೊ, ಏನೋ ನಾ ಹಡದ ಕೊಟ್ಟೇನಿ ಅಂತ ಮೂರ ಮಕ್ಕಳನರ ಕಂಡಾನ’ ಅಂತ ಅವನ ಹೆಂಡ್ತಿ ಅನ್ನೋಕಿ.
ನಾ ಅಕಿಗೆ ಕಾಡಸಲಿಕ್ಕೆ
’ಮತ್ತ ಬೆಳಿಗ್ಗೆ ಎದ್ದ ಕೂಡಲೇ ಇಂಟ್ರಾ ಡೇ ಟ್ರೇಡಿಂಗ ಅಂತ ಮನ್ಯಾಗ ಇರ್ತಾನ, ಮೂರ ಏನ ಆರ ಮಕ್ಕಳ ಆಗಬೇಕಿತ್ತ ತೊಗೊ’ ಅಂತ ಅಂದರ ಅಕಿ
’ಹೌದ, ಮಾರಾಯಾ, ನಾ ಲಗ್ನ ಆದ ಹೋಸ್ದಾಗಿ, ಗಂಡ ಮನ್ಯಾಗ ಟ್ರೇಡಿಂಗ ಮಾಡ್ತಾನ, ಮಂದಿ ಗಂಡಂದರ ಗತೆ ಹೊರಗ ಕೆಲಸಕ್ಕ ಹೋಗಂಗಿಲ್ಲಾ ಅಂತ ಭಾರಿ ಖುಷ್ ಆಗಿದ್ದೆ ಆದರ ಈಗ ನೋಡಿದ್ರ ಯಾವಾಗ ಮನಿ ಬಿಟ್ಟ ಹೋಗ್ತಾನ ಅನ್ನೊಂಗ ಆಗೇದಪಾ’ ಅಂತ ಅಂತಾಳ.
ಇನ್ನ ಅಂವಾ ಟ್ರೇಡಿಂಗ ಮಾಡಬೇಕಾರ ಅವನ ಮನಿಗೆ ಹೋಗಿ ಬಿಟ್ರ ಅಂವಾ ಫೋನನಾಗ ಮಾತಾಡೊದ ಕೇಳಿದರ ನೀವ ಗಾಬರಿನ ಆಗ್ತೀರಿ.
’ಏ, infosys ಮಾರ….VRL ತೊಗೊ, ನಾ ಹೇಳ್ತೇನಿ ಕೇಳ ಈ ಕ್ವಾರ್ಟರ್ ಎಂಡಿಗೆ infosys ಬೀಳ್ತೈತಿ. TCS ಎತ್ತ, ನೆಕ್ಸ್ಟ ಕ್ವಾರ್ಟರಗೆ ಡಿವಿಡೆಂಡ್ ಬರ್ತೈತಿ’ ಅನ್ನೊಂವಾ…..
ಮಳಿ ಛಲೋ ಬಂದರ ಅಗ್ರಿ ಒಳಗ ಇನ್ವೆಸ್ಟ ಮಾಡ್ತಾನ, ಜಾಸ್ತಿ ಮಳಿ ಬಂದ ಮಲೇರಿಯಾ, ಡೆಂಗ್ಯೂ ಬರಲಿಕತ್ತರ ಫಾರ್ಮಾದಾಗ ಇನ್ವೆಸ್ಟ ಮಾಡ್ತಾನ, ಬ್ಯಾಸಗಿ ಒಳಗ ಕನಸ್ಟ್ರಕ್ಷನ್, ಬ್ಯಾಂಕಿಂಗ್ ಅಂತ ಗಂಟ ಬಿಳ್ತಾನ. ಅಲ್ಲಾ ಹಂಗ ಅವನ ಶೇರ ಮಾರ್ಕೇಟ್ ನಾಲೇಜ್ ಭಾರಿ ಅದ ಮತ್ತ.
ಇಂವಾ ಈ ಶೇರ ಮಾರ್ಕೇಟ್ ಅಲ್ಲದ ರಿಯಲ್ ಎಸ್ಟೇಟ್ ದಾಗ ಬ್ಯಾರೆ ಇನ್ವೆಸ್ಟ ಮಾಡಿ, ಫಾಯದೇ ಬಂದ ಕೂಡಲೇ ಮಾರತಿದ್ದಾ.
ಪಾಪ ಇವರ ಮಾಂವ ಇಂವಾ ಹಿಂಗ ಮನ್ಯಾಗ ಟ್ರೇಡಿಂಗ್ ಮಾಡ್ಕೋತ ಕೂತರ ಸ್ವಂತ ಮನಿ ಕಟ್ಟಂಗಿಲ್ಲ ಅಂತ ಅವಂಗ ಕುಸಗಲ್ ರೋಡನಾಗ ಒಂದ ಹದಿನೈದ ವರ್ಷದ ಹಿಂದ 3000 sq.ft ಜಾಗಾ ಕೊಡಸಿದ್ದರು, ಆವಾಗ ಅಲ್ಲಿ ರೇಟ್ 175/sq.ft ನಡದಿತ್ತ. ಈ ಮಗಾ ಮುಂದ ಒಂದ ಎರಡ ವರ್ಷಕ್ಕ ಅವರಿಗೆ ಹೇಳಲಾರದ ಆ ಜಾಗಾ 600/sq.ft ಗೆ ಮಾರಿ ಅಲ್ಲಿಂದ ಮೂರ ಕಿ.ಮಿ ದೂರ ಸೇಮ್ ಸೈಜ್ ಪ್ಲಾಟ್ 350/sq.ft ಕ್ಕ ತೊಗೊಂಡಾ, ಮುಂದ ಮೂರ ವರ್ಷಕ್ಕ ಮತ್ತ ಅದನ್ನ 650ಕ್ಕ ಮಾರಿ ಮತ್ತ ಅಲ್ಲಿಂದ ಮೂರ ಕಿ.ಮಿ.ದೂರ 480/sq.ft ಕ್ಕ ಅಷ್ಟ ಜಾಗಾ ಹಿಡದಾನ, ಅಲ್ಲಾ…ಎಷ್ಟ ಪ್ರಾಫಿಟ್ ಬುಕ್ ಮಾಡ್ಕೊಂಡಾ ನೋಡ್ರಿ ಮಾವ ಕೊಡಸಿದ್ದ ಜಗಾದ ಮ್ಯಾಲೆ. ಹಿಂಗ ಸೈಟಿಗೆ ಸೈಟ ಟ್ರೇಡಿಂಗ್ ಮಾಡ್ತಾನ ಹೊರತು ಮನಿ ಇವತ್ತಿಗೂ ಕಟ್ಟಿಲ್ಲಾ.
’ರ್ರೀ….ನೀವು ಹಿಂಗ ಇದ್ದ ಜಾಗಾ ಮಾರ್ಕೋತ ಅದರಕಿಂತ ಮೂರ ಮೂರ ಕಿ.ಮಿ. ಮುಂದ ಕಡಮಿ ರೇಟ ಅಂತ ಜಾಗ ಹಿಡ್ಕೋತ ಹೋಂಟರ ಒಂದ ದಿವಸ ನವಲಗುಂದ ಔಟಸ್ಕರ್ಟ್ ಮುಟ್ಟತಿರಿ, ಆದರ ನಂಬದ ಸ್ವಂತ ಮನಿ ಏನ ಹುಬ್ಬಳ್ಳ್ಯಾಗ ಆಗಂಗಿಲ್ಲಾ” ಅಂತ ಅವನ ಹೆಂಡ್ತಿ ಹೋಯ್ಕೊತಾಳ…ಪಾಪ, ಅಕಿ ಸಂಕಟ ಏನಪಾ ಅಂದರ ಜಾಗಾ ಅವರಪ್ಪ ಕೊಡಸಿದ್ದ ಮಗಳ ಮನಿ ಕಟ್ಟಲಿ ಅಂತ ಈ ಮಗಾ ಅದನ್ನು ಟ್ರೇಡಿಂಗ ಮಾಡ್ತಿದ್ದಾ, ಜಾಸ್ತಿ ಏನರ ಅಂದರ
’ನಿಮ್ಮಪ್ಪ ಕೊಡಸಿದ್ದ 3000 sq.ft.ಜಾಗಾ…. ಅದ ಹಂಗ ಅದ ಇಲ್ಲ..ಬಾಯಿ ಮುಚಗೊಂಡ ಇರ…..ಅದ ಹುಬ್ಬಳ್ಳ್ಯಾಗರ ಇರಲಿ ನವಲಗುಂದನಾಗರ ಇರಲಿ’ ಅಂತಾನ.
ಅಲ್ಲಾ ಅವನ ಪ್ರಕಾರ ಐವತ್ತ ಅರವತ್ತ ಲಕ್ಷ ಖರ್ಚ ಮಾಡಿ ಮನಿ ಕಟ್ಟೋದ ಡೆಡ್ ಇನ್ವೆಸ್ಟಮೆಂಟ್. ನಾವೇಲ್ಲಾ earnings, savings ಅಂತ ಅಂದರ ಅಂವಾ wealth creation ಅಂತಿದ್ದಾ.
’ಏನೋ ಪುಣ್ಯಾ ಹೆಂಡ್ತಿ ಮಕ್ಕಳನ್ನ ಟ್ರೇಡಿಂಗ ಮಾಡಲಿಕ್ಕೆ ಬರಂಗಿಲ್ಲಾಂತ ಸುಮ್ಮನ ಬಿಟ್ಟಾನ…ಇಲ್ಲಾ ಅಂದರ ನಮ್ಮನ್ನೂ ಜಾಸ್ತಿ ಫಾಯದೇ ಕಂಡರ ಕ್ವಾರ್ಟರ್ ಎಂಡಿಗೆ ಮಾರೊವನ” ಅಂತ ಅವನ ಹೆಂಡ್ತಿ ಅನ್ನೋಕಿ.
ಪಾಪ ಅವನ ಹೆಂಡ್ತಿ, ಗಂಡ ಹೆಂಗಿದ್ದರೂ ಇಂಟ್ರಾ ಡೇ ಶೇರ್ ಟ್ರೇಡಿಂಗ ಮನ್ಯಾಗ ಮಾಡ್ತಾನ, ಯಾವಾಗ ಬೇಕ ಆವಾಗ ಅವಿಲೇಬಲ್ ಇರ್ತಾನ ಅಂತ ಅನ್ಕೊಂಡಿದ್ಲು ಆಮ್ಯಾಲೆ ಗೊತ್ತಾತಲಾ ಇವನ ಹಣೇ ಬರಹ. ಬರೇ ಮನ್ಯಾಗ ಕೂತ ಅದನ್ನ ತೊಗೊ ಇದನ್ನ ಮಾರ, ಅಲ್ಲಿ ಜಾಗಾಕ್ಕ ಇಷ್ಟ ರೇಟ್ ಇಲ್ಲೇ ಇಷ್ಟ ರೇಟ್ ಅಂತ ಕಥಿ ಹೇಳಿದ್ದ ಹೇಳಿದ್ದ.
ಇವನ ಹಣೇಬರಹ ನೋಡಿ ಕಡಿಕೆ ಅವನ ಹೆಂಡ್ತಿ ಸುಮ್ಮನ ಎಂಟ ತಾಸ ಕೆಲಸಕ್ಕ ಹೋಗೊ ಗಂಡನ್ನ ಮಾಡ್ಕೊಂಡರ ಇಷ್ಟೊತ್ತಿಗೆ ಒಂದ ಸ್ವಂತ ಮನಿನರ ಆಗ್ತಿತ್ತ ಅಂತ ಚಡ ಪಡಸ್ತಾಳ.
ಮೊನ್ನೆ ಇಂವಾ ಫೋನದಾಗ ’ಏ, ಕನಸ್ಟ್ರಕ್ಶನ್ ಸೆಕ್ಟರ್ ಛಲೋ ಅದ 1000 ACC ತೊಗೊ’ ಅಂತ ಹೇಳಬೇಕಾರ ಇಕಿ ’ಅಲ್ಲ ಮಾರಾಯಾ, ಹೆಂಗಿದ್ದರು ಕನಸ್ಟ್ರಕ್ಶನ್ ಸೆಕ್ಟರ್ ಛಲೋ ಅಂತಿ ಎಲ್ಲೇರ ಗೌಂಡಿ ಕೆಲಸಕ್ಕರ ಹೋಗ..ನಿನ್ನ ಇಂಟ್ರಾ ಡೇ ಟ್ರೇಡಿಂಗ ನಾ ಮನ್ಯಾಗ ಕೂತ ಮಾಡ್ತೇನಿ’ಅಂತ ಅಂದ್ಲಂತ.
’ಅಯ್ಯ..ನಿನಗೇನ ತಲಿ ಗೊತ್ತಾಗತದ ಶೇರ್ ಮಾರ್ಕೇಟ್…ಬಾಯಿ ಮುಚಗೊಂಡ ಕೂಡ’ ಅಂತ ಇಂವಾ ಅಂದನಂತ.
ಅಲ್ಲಾ ಅಂವಾ ಹಂಗ ಹೇಳೋದ ಖರೇನ ಅದ, ಲಗ್ನ ಆದ ಹೊಸ್ದಾಗಿ ಇಕಿಗೂ ಅಂವಾ ಟ್ರೇಡಿಂಗ ಕಲಸಬೇಕಂತ ಭಾಳ ತಲಿಕೆಡಸ್ಕೊಂಡಿದ್ದಾ. ಯಾವದ ತೊಗೊ ಬೇಕು, ಯಾವ ರೇಟಿಗೆ ತೊಗೊಬೇಕು, ಯಾವಾಗ ಮಾರ‍ಬೇಕು, ಯಾವಾಗ ಡಿಲೇವರಿ ಮಾಡ್ಕೊಬೇಕು ಅಂತ ಎಲ್ಲಾ ತಿಳಿಸಿ ಹೇಳ್ತಿದ್ದಾ. ಆದರ ಅಕಿ ತಲ್ಯಾಗ ಏನ ಹೋಗ್ತಿದ್ದಿಲ್ಲಾ.
ಒಂದ ಸರತೆ ಸೆನ್ಸೆಕ್ಸ್ ಇಪ್ಪತ್ತ ಸಾವಿರ ದಾಟಿದ್ದ ದಿವಸ ಇಂವಾ ಫುಲ್ ಖುಷ ಆಗಿದ್ದರ ಇಕಿ
’ರ್ರಿ…ಸೆನ್ಸೆಕ್ಸ್ ಮಾರಿ ನಿಫ್ಟಿ ತೊಗೊರಿ…..ಸೆನ್ಸೇಕ್ಸ್ ಜಾಸ್ತಿ ಅದ ನಿಫ್ಟೀ ಕಡಮಿ ಅದ’ ಅಂತ ಗಂಟ ಬಿದ್ದಳು…
ಇಂವಾ ಅಕಿ ಮಾತ ಕೇಳಿ ಆತ್ಮಹತ್ಯೆ ಮಾಡ್ಕೋಳೊದ ಒಂದ ಬಾಕಿ ಇತ್ತ…ಅಲ್ಲಾ ಅಕಿ ಲಾಜಿಕ್ ಕರೆಕ್ಟ ಇತ್ತ, ಇವನ ಹೇಳಿದ್ದಾ ಯಾವದರ ರೇಟ ಜಾಸ್ತಿ ಬಂತಂದರ ಅದನ್ನ ಮಾರಿ ಬಿಡಬೇಕ, ಭಾಳ ರಿಸ್ಕ ತೊಗೊಬಾರದು. ಅದನ್ನ ಮಾರಿ ಡೌನ ಇದ್ದದ್ದ ತೊಗೊಬೇಕು ಅಂತ….ಪಾಪ ಅಕಿ ಹಿಂಗಾಗಿ ಸೀದಾ sensex ಮಾರಿ nifty ತೊಗೊಳಿಕ್ಕೆ ಹೊಂಟಿದ್ಲು.
ಅಲ್ಲಾ ಅವತ್ತ ಅಕಿ ಏನರ ಖರೇನ sensex ಮಾರಿದ್ದರ ನಮ್ಮ ದೋಸ್ತ ಇವತ್ತ ಟ್ರೇಡಿಂಗ ಬಿಟ್ಟ ಬ್ಯಾರೆ ಕಡೆ ಕೆಲಸಕ್ಕರ ಹೋಗ್ತಿದಾ…ಮ್ಯಾಲೆ ಮನಿನೂ ಕಟ್ತಿದ್ದಾ ಬಿಡ್ರಿ.

3 thoughts on “ಈ sensex ಮಾರಿ nifty ತೊಗೊರಿ…..

  1. Real fun. But, on a serious note, it also points out infatuation to money of some people and how they value money over other
    aspects of life.

Leave a Reply

Your email address will not be published. Required fields are marked *

About Me

ಹುಟ್ಟಿದ್ದು 1973, ಅಕ್ಟೋಬರ 13ಕ್ಕ. ಹೆಸರಿಗೆ ಹುಟ್ಟಿದ್ದ ಶಿವಮೊಗ್ಗಾ ಆದರು, ಬೆಳದಿದ್ದು-ಬಲತಿದ್ದು-ಕಲತಿದ್ದು- ಕಳತಿದ್ದು (ಪಕ್ವವಾಗಿದ್ದು) ಎಲ್ಲಾ ಹುಬ್ಬಳ್ಳಿ ಒಳಗ, ಕಲತಿದ್ದು ಬಿ.ಏಸ್ಸಿ, ಕೋತಂಬರಿ ಕಾಲೇಜ ಹುಬ್ಬಳ್ಳಿ ಒಳಗ ಮುಂದ ಎಮ್.ಬಿ.ಎ (ಸಿಂಬಾಯ್ಸಿಸ್- ಪೂಣೆ). ಸದ್ಯೇಕ...

Follow me on Facebook

ನನ್ನ ಸಂಪೂರ್ಣ ಪ್ರೊಫೈಲ್ ವೀಕ್ಷಿಸಿ