ವರ್ಷಾಂತಕಕ್ಕ ಗಿಫ್ಟ ಏನ ಕೊಡೊದಿರಂಗಿಲ್ಲಾ……

ಈಗ ಒಂದ ತಿಂಗಳ ಹಿಂದಿನ ಮಾತ, ನಮ್ಮ ಪೈಕಿ ಒಬ್ಬರದ ವರ್ಷಾಂತಕ ಇತ್ತ. ಹಂಗ ನಮ್ಮಲ್ಲೆ ನಾರ್ಮಲಿ ಇತ್ತೀಚಿಗೆ ಕ್ರಿಯಾ, ಕರ್ಮಾ ಎಲ್ಲಾ ಕರ್ತೃಉ ತನಗ ಅನಕೂಲ ಆಗಲಿ ಅಂತ ತಡಸ ತಪೋಭೂಮಿ ಒಳಗ ಮಾಡ್ತಾನ, ಅಲ್ಲೇ ಅಗದಿ ಪ್ರಶಸ್ತ ಮಾಡ್ತಾರ ಮ್ಯಾಲೆ ಖರ್ಚನೂ ಭಾಳ ಆಗಂಗಿಲ್ಲಾ.
ಇನ್ನ ಹಿಂತಾವೇಲ್ಲಾ ಫಂಕ್ಶನ್ ಹೋಗೊರ ಬರೋರ ಅನಕೂಲ ನೋಡಿ ಮಾಡಲಿಕ್ಕಂತೂ ಆಗಂಗಿಲ್ಲ ಬಿಡ್ರಿ. ಅದರಾಗ ’ನಮ್ಮಪ್ಪಂದ ನಾ ಎಲ್ಲೇ ಅನಕೂಲ ಆಗ್ತದ ಅಲ್ಲೆ ಮಾಡ್ತೇನಿ’ ಅಂತ ಅನ್ನೋರು ಇರ್ತಾರ. ಇನ್ನ ಅದ ಅವರಪ್ಪಂದ ಅಂದ ಮ್ಯಾಲೆ ನಮ್ಮಪ್ಪಂದ ಏನ ಗಂಟ ಹೋಗೊದ, ನಮಗ ಅನಕೂಲ ಆದರ ಹೋದಾ ಇಲ್ಲಾಂದರ ಇಲ್ಲಿಂದ RIP ಅಂದಾ.
ಆದರ ಇವರ ಯಾಕೋ ’ನಮ್ಮಪ್ಪನ್ನ ಪ್ರಸಾದ ಒಂದ ನಾಲ್ಕ ಜಾಸ್ತಿ ಮಂದಿ ಉಂಡರ ತಪ್ಪಿಲ್ಲಾ’ ಅಂತ ಇಲ್ಲೇ ಹುಬ್ಬಳ್ಳ್ಯಾಗ ಮಠದಾಗ ಇಟಗೊಂಡಿದ್ದರು. ಮ್ಯಾಲೆ ನನಗೂ ಫೋನ ಮಾಡಿ
’ಇಲ್ಲೇ ಮಠದಾಗ ಇಟಗೊಂಡೇನಪಾ, ನೀ ತಪೋಭೂಮಿ ಒಳಗ ಇಟಗೊಂಡರ ಗಾಡಿ ಖರ್ಚ ಮೈಮ್ಯಾಲೆ ಹಾಕ್ಕೊಂಡ ಬರೋಂವೇನಲ್ಲಾ, ಹತ್ತರ ಅದ ಕರೆಕ್ಟ ಊಟದ ಟೈಮಿಗೆ ಬಾ’ ಅಂತ ಹೇಳಿದ್ದರು. ಅದರಾಗ ನಮ್ಮವ್ವ ಹಿರೇಮನಷ್ಯಾರ ವರ್ಷಾಂತಕ ಬಿಡಬಾರದು. ನೀ ಹೋಗಿ ಬರಬೇಕಾರ ಎರಡ ರವಾ ಉಂಡಿ ಇಸ್ಗೊಂಡ ಬಾ ಅಂತ ಬ್ಯಾರೆ ಹೇಳಿದ್ಲು.
ಸರಿ ಬಿಡ, ನನಗು ಮನ್ಯಾಗಿಂದ ಉಂಡ ಉಂಡ ಬ್ಯಾಸರಾಗಿತ್ತ, ಫಾರ ಚೇಂಜ್ ಮಠದ ಊಟಾ ಹೊಡದರಾತು ಅಂತ ಹೋದೆ. ಹಂಗ ನಮ್ಮ ಪೈಕಿ ಭಾಳ ಜನಾ ಬಂದಿದ್ದರು, ನಾರ್ಮಲಿ ಇವರೇಲ್ಲಾ ತಡಸದಾಗ ಇಟ್ಗೊಂಡರ ಬರೋರಲ್ಲಾ, ಇಲ್ಲೇ ಇದ್ದದ್ದಕ್ಕ ಹಾಜರ ಆಗಿ ಇನ್ನೂ ಎಲಿ ಹಾಕೋಕಿಂತ ಮೊದ್ಲ ಚಾಪಿ ಮ್ಯಾಲೆ ಶಲ್ಯೆ ಒಗದ ಜಾಗಾ ಹಿಡದಿದ್ದರು. ಇನ್ನ ನಾ ಸೀಟ ಹುಡ್ಕ್ಯಾಡಲಿಕತ್ತಿದ್ದೆ ಅಷ್ಟರಾಗ ನಮ್ಮ ಕಾಲೇಜ ದೋಸ್ತ ರಾಘ್ಯಾ
“ಲೇ..ಆಡ್ಯಾ, ಜಗಾ ಹಿಡದೇನಿ ಲಗೂ ಬಾ..ಯಾರರ ಬಂದ ಗಿಂದಾರ” ಅಂತ ಹೆಣ್ಣಮಕ್ಕಳ ಪಂಕ್ತಿ ಒಳಗ ಕೂತೊಂವ ಒದರಿದಾ. ನಾ ಅಲ್ಲೇನ ಅಸಂಯ್ಯ ಹೋಗೊದ ಅಂತ ವಿಚಾರ ಮಾಡಿದೆ ಆದರ ಅಷ್ಟರಾಗ ಗಂಡಸರ ಪಂಕ್ತಿ ತುಂಬಿತ್ತ ಭಡಾ ಭಡಾ ಅವನ ಬಾಜುಕ ಹೋಗಿ ಕೂತೆ. ಅವನ ಹೆಂಡ್ತಿ ತನ್ನ ಒಂಬತ್ತವಾರಿ ಸೆರಗ ಹಾಸಿ ಇಡಿ ಮನೆತನಕ್ಕ ಸೀಟ ಹಿಡಿದಿದ್ಲ. ಹಂಗ ಇಂವಾ ಸಹ ಕುಟುಂಬ ಪರಿವಾರ ಸಹಿತ ವರ್ಷಾಂತಕ ಅಂದರ ಏನೂ ಅಂತ ಗೊತ್ತ ಇರಲಾರದ ಮಕ್ಕಳನ್ನು ಕರಕೊಂಡ ಬಂದಿದ್ದಾ. ನಂಗ ಒಂದನೇ ಪಂಕ್ತಿಗೆ ಎಲಿ ಸಿಕ್ಕತಲಪಾ ಅಂತ ಖುಷಿ ಆತ, ಅಲ್ಲಾ ಮಠದಾಗ ಒಂದನೇ ಪಂಕ್ತಿಗೆ ಊಟಾ ಮಾಡೋದ ಅಂದರ ಫಸ್ಟ ಡೇ ಫಸ್ಟ ಶೊ ಸುದೀಪನ ಪಿಕ್ಚರ ನೋಡಿದಂಗ.
ಇನ್ನ ಎಲಿ ಸಿಕ್ಕರು ’ವೆಂಕಟರಮಣ ಗೋವಿಂದ…ಗೋವಿಂದಾ’ ಅಂತ ಊಟಾ ಶುರು ಮಾಡಲಿಕ್ಕೆ ಒಂದ ಅರ್ಧಾ ತಾಸರ ಬೇಕ. ಎಲ್ಲಾ ಐಟೆಮ್ ಬಡಸಿ ತೀರ್ಥ, ಗಂಧ, ಅಂಗಾರ-ಅಕ್ಷಂತಿ ಎಲ್ಲ ಬರೋದರಾಗ ಹಾಕಿದ ಅನ್ನ ಆರಿ ಅಂಗಾರ ಆಗಿರ್ತದ. ಇನ್ನ ಅಲ್ಲಿ ತನಕ ಖಾಲಿ ಇದ್ದೆ ಅಂತ ರಾಘ್ಯಾನ ಜೊತಿ ಹರಟಿ ಹಚ್ಚಿದೆ.
’ಮತ್ತೇನಲೇ ರಾಘ್ಯಾ…ಏನ ಅಗದಿ ಪೂರ್ತಿ ಪರಿವಾರ ಕಟಗೊಂಡ ಬಂದಿ ಮಗನ, ಮೊನ್ನೆ ರಾಹುಲನ ಮದ್ವಿ ಒಳಗ ಕಾಣಲೇಲಾ…’ ಅಂತ ನಾ ಸಹಜ ಅನ್ನೋದಕ್ಕ ಅವನ ಹೆಂಡ್ತಿ ಅಡ್ಡ ಬಾಯಿ ಹಾಕಿ
’ಇದ ವರ್ಷಾಂತಕ ಪ್ರಶಾಂತಣ್ಣಾ…ಅದಕ್ಕ ನಮ್ಮ ಮನೆಯವರ ಬಂದಾರ…’ ಅಂದ್ಲು.
ನಂಗೊತ್ತಾತ ಅಕಿ ಯಾಕ ಆ ಡೈಲಾಗ ಹೊಡದ್ಲು ಅಂತ. ಇವಂದ ಮೊದ್ಲಿಂದ ಒಂದ ಚಟಾ ಏನಂದರ ಇಂವಾ ಎಲ್ಲೇ ಹೋದರು ಒಟ್ಟ ಗಿಫ್ಟ ಕೊಡೊ ಮನಷ್ಯಾ ಅಲ್ಲಾ, ಹಿಂಗಾಗಿ ಎಲ್ಲೆ ಗಿಫ್ಟ ಕೊಡೊದ ಇರ್ತದ ಅಲ್ಲೆ ಬರ್ತಿದ್ದಿಲ್ಲಾ. ಅದಕ್ಕ ಅವನ ಹೆಂಡತಿ ಇಂಡೈರೆಕ್ಟ ಆಗಿ ’ಇದು ವರ್ಷಾಂತಕ, ಇಲ್ಲೇನ ಗಿಫ್ಟ ಕೊಡೊದ ಇರಂಗಿಲ್ಲಾ ಅಂತ ನನ್ನ ಗಂಡ ನಮ್ಮನ್ನೇಲ್ಲಾ ಕರಕೊಂಡ ಬಂದಾನ’ ಅಂತ ಹೇಳಿದ್ಲು.
’ಹೌದಿನಪಾ…ಮಗನ ಇಲ್ಲೇ ಗಿಫ್ಟ ಕೊಡೊದ ಇಲ್ಲಾ ಅಂತ ಬಂದಿ ಏನ’ ಅಂತ ನಾ ಕೇಳಿದರ…’ಮಗನ ಅರವತ್ತ ರೂಪಾಯಿ ಬಡದ ಆಟೋದಾಗ ಬಂದೇನಿ, ಈಗ ಮತ್ತ ಹೋಗ್ತ ಅರವತ್ತ…ಗಿಫ್ಟ ಇಲ್ಲಾಂದರ ಏನಾತ ನೂರಾ ಇಪ್ಪತ್ತ ಹೋತಿಲ್ಲ’ ಅಂತ ನಂಗ ಜೋರ ಮಾಡಿದಾ.
’ಮಗನ ನೂರಾ ಇಪ್ಪತ್ತ ಹೋದರೇನಾತ ನಾಲ್ಕನೂರ ರೂಪಾಯಕ್ಕ ಒಂದ ಎಲಿ ಇದ್ದದ್ದ ನಾಲ್ಕ ಊಟಾ ಹೊಡದ ಹೊಂಟಿರಿ ಅದನ್ಯಾರ ಹೇಳಬೇಕ’ ಅಂದೆ.
ಅಲ್ಲಾ, ಹಂಗ ಹಿಂತಾ ಡಿಸ್ಕಶನ್ ನಮ್ಮಿಬ್ಬರ ನಡಕ ಭಾಳ ಆಗ್ಯಾವ ಬಿಡ್ರಿ, ಅಂವಾ ಏನ ತನ್ನ ಚಾಳಿ ಬಿಟ್ಟಿಲ್ಲಾ, ನಾವೇನ ಅನ್ನೋದ ಬಿಟ್ಟಿಲ್ಲಾ.
ಅದರಾಗ ಇದ ಇವತ್ತಿಂದಲ್ಲಾ ಏನಲ್ಲಾ, ಹುಟ್ಟ ಚಾಳಿ ಅದ ಸುಟ್ಟರು ಹೊಗಂಗಿಲ್ಲಾ. ಮೊದ್ಲ ಎಲ್ಲೇರ ದೊಸ್ತರ ಎಲ್ಲಾರೂ ಸೇರಿ ಕಾಂಟ್ರಿಬ್ಯೂಶನ್ ಮಾಡಿ ಯಾರಿಗರ ಗಿಫ್ಟ ಕೊಡಬೇಕಾರ ಈ ಮಗಾ ಅಗದಿ ನಿರ್ಲಜ್ಜಾಗಿ
’ಏ ನಾ ಏನ ಕೊಡಂಗಿಲ್ಲಾ’ ಅಂತ ಹೇಳಿ ಬಿಡ್ತಿದ್ದಾ. ಇನ್ನ ನಾವ ಆ ಗಿಫ್ಟ ಮ್ಯಾಲೆ ಇಂವಂದೊಂದ ಬಿಟ್ಟ ಹೆಂಗ ಹೆಸರ ಹಾಕ್ಸೋದ ಅಂತ ಇವಂದು ಹೆಸರ ಹಾಕಸ್ತಿದ್ವಿ. ಕಡಿಕೆ ಇಂವಾ ಪ್ರತಿ ಸರತೆ ಹಿಂಗ ಮಾಡೋದ ನೋಡಿ ಅವನ ಹೆಸರ ಹಾಕ್ಸೋದ ಬಿಟ್ಟರು ಅಂವಾ ಏನ ತಲಿಕೆಡಸಿಗೊತಿದ್ದಿಲ್ಲಾ. ಮಗಾ ಗಿಫ್ಟ ಕೊಡ್ಬೇಕಾರ ಅಗದಿ ಪದ್ಧತ ಸೀರ ನಮ್ಮಕಿಂತಾ ಮುಂದ ಗಿಫ್ಟ ಕೊಡೊರ ಜೊತಿ ತಂದು ಕೈಹಚ್ಚಿ ’ಮಮ’ಅಂತ ಗಿಫ್ಟ ಕೊಟ್ಟ ಫೋಟೊದಾಗ, ವೀಡಿಯೋದಾಗ ಮಿಂಚತಿದ್ದಾ.
ಇನ್ನ ಯಾರದರ ಎಂಗೇಜಮೆಂಟ ಇದ್ದರ, ವೈಕುಂಠ ಸಮಾರಾಧ್ನಿ, ಸತ್ಯನಾರಯಣ ಪೂಜಾ ಇದ್ದರ ಒಟ್ಟ ತಪ್ಪಸ್ತಿದ್ದಿಲ್ಲಾ, ಯಾಕಂದರ ಅವಕ್ಕ ಗಿಫ್ಟ ಕೊಡೊದ ಇರ್ತಿದ್ದಿಲ್ಲಾ. ಇನ್ನ ಮದ್ವಿಗೆ ಕರದರ ಮಗಾ ಹಿಂದಿನ ದಿವಸ ’ರುಕ್ಕೋತ’ಕ್ಕ ಬಂದ ಮಂಡಗಿ ಊಟಾ ಹೊಡದ ಹೋಗಿ ಬಿಡೋಂವಾ. ’ಏ, ನಾಳೆ ಆಫೀಸ ತಪ್ಪಸಲಿಕ್ಕೆ ಆಗಂಗಿಲ್ಲಪಾ ಮಾರಾಯ, ಪಾಪ, ಇಷ್ಟ ಕರದ ಹೋಗ್ಯಾರ ತಪ್ಪಸಲಿಕ್ಕೆ ಬರಂಗಿಲ್ಲಾ ಅಂತ ಇವತ್ತ ಬಂದ್ವಿ’ ಅಂತಿದ್ದಾ.
ಹಂಗ ಮದ್ವಿ ಕಾರ್ಡ ಒಳಗ ಅಪ್ಪಿ-ತಪ್ಪಿ ‘ presents in blessings only’ ಅಂತ ಹಾಕಸಿದ್ದರ ಎರಡು ದಿವಸನೂ ಬಂದ ಕಟದ ಹೋಗ್ತಿದ್ದನ ಮತ್ತ.
ಅವನ ಹೆಂಡ್ತಿಗಂತು ಇವನ ಸ್ವಭಾವ ಸಂಬಂಧ ಸಾಕ ಸಾಕಾಗಿ ಬಿಟ್ಟಿತ್ತ. ಅಕಿ ನೋಡಿದರ ದೇಸಾಯರ ಮನೆತನದೊಕಿ, ಕೊಟ್ಟ ಗೊರತ ಹೊರತು ಇಸ್ಗೊಂಡ ಗೊತ್ತಿಲ್ಲಾ, ಇಂವಂಗ ನೋಡಿದರ ಕೈಬಿಟ್ಟ ಕೊಟ್ಟ ಗೊತ್ತಿದ್ದಿಲ್ಲಾ.
ಸೋಡ ಮುಂಜವಿಗೆ ಕರೀರಿ, ದೇವರ ಊಟಕ್ಕ ಕರಿರಿ, ಬ್ರಾಹ್ಮಣ ಮುತ್ತೈದಿ ಅಂತ ದಂಪತ್ತ ಕರೀರಿ..ಒಟ್ಟ ಎಲ್ಲೆ ಗಿಫ್ಟ ಕೊಡೊದ ಇರಂಗಿಲ್ಲಾ ಅಲ್ಲೆ ಹಾಜರ. ಆಫೀಸನಾಗ ಒಂದ ತಾಸ ಹೇಳ್ಕೊಂಡ ಬಂದ ಬಿಡ್ತಿದ್ದಾ. ಅದರಾಗ ಈಗ ಒಂದ ನಾಲ್ಕ ವರ್ಷದಿಂದ ಅವರಪ್ಪ ಹೋದ ಮ್ಯಾಲೆ ಶ್ರಾದ್ಧ ಊಟಕ್ಕ ಬ್ರಾಹ್ಮಣ ಅಂತ ಯಾರ ಕರದರ ಸಾಕ ಅಗದಿ ಖುಷಿಲೇ ಬರ್ತಿದ್ದಾ. ಯಾಕಂದರ ಅಲ್ಲೇ ಮ್ಯಾಲೆ ದಕ್ಷಿಣಿ ಬ್ಯಾರೆ ಸಿಗತಿತ್ತ.
ಇನ್ನ ಯಾವಾಗ ಬಳಗದವರ invitation card ಜೊತಿ return gift ಕೊಟ್ಟ ಹೊಂಟರಲಾ ಆವಾಗ ಸ್ವಲ್ಪ ತ್ರಾಸ ಆಗಲಿಕತ್ತ, ಅವನ ಹೆಂಡ್ತಿ ’ಅವರ ಕೊಟ್ಟ ಹೋಗ್ಯಾರ ನಾವು ಕೊಡಬೇಕ’ ಅಂತ ಗಂಟ ಬಿದ್ದದ್ದಕ್ಕ ಇಂವಾ ಒಬ್ಬರ ಕೊಟ್ಟದ್ದ ರಿಟರ್ನ್ ಗಿಫ್ಟ ಮತ್ತೊಬ್ಬರಿಗೆ ಗಿಫ್ಟ ಅಂತ ಕೊಟ್ಕೋತ ಹೊಂಟಾನ.
ಮೊನ್ನೆ ನನ್ನ ಮಗಳ ಬರ್ಥಡೇಕ್ಕ ಡೆನಿಸನ್ನಗೆ ಬಂದಾಗ ಮಗಾ ನಾ expect ಮಾಡಿದ್ದಿಲ್ಲಾ ಆದರೂ ಗಿಫ್ಟ ಕೊಟ್ಟಾ. ಅದ ಏನ ಗಿಫ್ಟ ಕೊಟ್ಟಾ ಅಂತ ನೋಡಿದರ ೩ ವರ್ಷದ ಹಿಂದ ಅವನ ಮಗನ ಬರ್ಥಡೇಕ್ಕ ನಾ ಕೊಟ್ಟದ್ದ ನೂರಾ ಐವತ್ತರದ ಚೆಸ್ ಸೆಟ್ ನನ್ನ ಮಗಳಿಗೆ ಕೊಟ್ಟ ನಾಲ್ಕ ಮಂದಿ ಕರಕೊಂಡ ಬಂದ 675 + gst ಊಟಾ ಹೊಡದ ಹೋಗಿದ್ದಾ.
ಅಲ್ಲಾ, ನಾ ಏನ ಹಂಗ ಯಾರ ಎಷ್ಟೇಷ್ಟ ಕೊಟ್ಟರು, ಊಟದ್ದ ರೊಕ್ಕನರ ವರ್ಕೌಟ ಆತಿಲ್ಲೋ ಅಂತ ನೋಡಲಿಕ್ಕೆ ಹೋಗಿಲ್ಲಾ ಆದರೂ ಮಾತ ಹೇಳಿದೆ ಇಷ್ಟ.
ಇವನ್ವು ಹಿಂತಾ ಇಂಟರಿಸ್ಟಿಂಗ ಸ್ಟೋರಿ ಭಾಳ ಅವ, ಅವನ್ನೇಲ್ಲಾ ಬರಕೋತ ಕೂತರ ಸಪ್ಲಿಮೆಂಟೂ ಸಾಲಂಗಿಲ್ಲಾ. ಆದರೂ ಜಗತ್ತಿನಾಗ ಹಿಂತಾವರು ಇರ್ತಾರ ಅಂತ ಇಷ್ಟ ಬರಿಬೇಕಾತ.

One thought on “ವರ್ಷಾಂತಕಕ್ಕ ಗಿಫ್ಟ ಏನ ಕೊಡೊದಿರಂಗಿಲ್ಲಾ……

  1. ಪ್ರಶಾಂತ ಸರ್ ಮಸ್ತ್ ಬರದಿರಿ… ನಿಮ್ಮ ರಾಘ್ಯಾ ಇದ್ದಂಗ ನಮ್ಮ ದೋಸ್ತ ವಾಜ್ಯಾ ಇದ್ದಾನ ಮಸ್ತ್ ಛಲೋ ನೆನಪ ಆತು …

Leave a Reply

Your email address will not be published. Required fields are marked *

About Me

ಹುಟ್ಟಿದ್ದು 1973, ಅಕ್ಟೋಬರ 13ಕ್ಕ. ಹೆಸರಿಗೆ ಹುಟ್ಟಿದ್ದ ಶಿವಮೊಗ್ಗಾ ಆದರು, ಬೆಳದಿದ್ದು-ಬಲತಿದ್ದು-ಕಲತಿದ್ದು- ಕಳತಿದ್ದು (ಪಕ್ವವಾಗಿದ್ದು) ಎಲ್ಲಾ ಹುಬ್ಬಳ್ಳಿ ಒಳಗ, ಕಲತಿದ್ದು ಬಿ.ಏಸ್ಸಿ, ಕೋತಂಬರಿ ಕಾಲೇಜ ಹುಬ್ಬಳ್ಳಿ ಒಳಗ ಮುಂದ ಎಮ್.ಬಿ.ಎ (ಸಿಂಬಾಯ್ಸಿಸ್- ಪೂಣೆ). ಸದ್ಯೇಕ...

Follow me on Facebook

ನನ್ನ ಸಂಪೂರ್ಣ ಪ್ರೊಫೈಲ್ ವೀಕ್ಷಿಸಿ