ವಿವಾಹ ಎಂಟು ತರಹ…ವಿರಹ 108 ತರಹ….

ಮೊನ್ನೆ ಒಮ್ಮಿಂದೊಮ್ಮಿಲೇ ನನ್ನ ಹೆಂಡತಿ
“ರ್ರಿ…ನಿಂಬದ ಮದ್ವಿ ಆಗಿದ್ದ ಯಾ ಟೈಪ್?’ ಅಂತ ಕೇಳಿದ್ಲು.
ನಂಗ ಗಾಬರಿ ಆತ, ಇಕಿ ಏನ ಕೇಳಲಿಕತ್ತಾಳ ಅನ್ನೋದರ ತಳಾ ಬುಡಾನ ತಿಳಿಲಿಲ್ಲಾ, ಅಲ್ಲಾ ಅದರಾಗ ’ನಿಮ್ಮ ಮದ್ವಿ’ ಅಂತ ಬ್ಯಾರೆ ಅಂತಾಳ, ಇಕಿಗೇನ ನನ್ನ ಮದ್ವಿ ಸಂಬಂಧ ಇಲ್ಲೊ, ಇಲ್ಲಾ ನಂದ ಇನ್ನೊಂದ ಬ್ಯಾರೆ ಮದ್ವಿ ಆಗೇದ ಅಂತ ತಿಳ್ಕೊಂಡಾಳೊ ಅಂತ
’ಲೇ….ನಿಮ್ಮ ಮದ್ವಿ ಅಂದರ ಏನ ಅರ್ಥ, ನನ್ನ ಮದ್ವಿ ನಿಂಗ ಸಂಬಂಧ ಇಲ್ಲೇನ? ಯಾಕ ಆರಾಮ ಇದ್ದಿ ಇಲ್ಲ?’ ಅಂತ ಜೋರ ಮಾಡಿದೆ.
’ಸ್ವಾರಿ…ಬಾಯಿ ತಪ್ಪಿ ನಿಮ್ಮ ಮದ್ವಿ ಅಂತ ಬಂತ, for a moment ನಾನ ನಿಮ್ಮನ್ನ ಮದ್ವಿ ಆಗಿದ್ದ ಅನ್ನೋದನ್ನ ಮರತ ಬಿಟ್ಟಿದ್ದೆ. ಇರಲಿ, ನಾ ಏನ ಕೇಳಲಿಕತ್ತಿದ್ದೆ ಅಂದರ ಮನುಸ್ಮೃತಿ ಒಳಗ ಎಂಟ ಟೈಪ ಮದ್ವಿ ಅವ ಅಂತ ನಿನ್ನೆ ಪ್ರವಚನದಾಗ ಹೇಳಲಿಕತ್ತಿದರು, ಹಂಗರ ನಂಬದ ಯಾ ಟೈಪ ಮದ್ವಿ ಅಂತ ಕೇಳಿದೆ?’ ಅಂದ್ಲು.
ನಂಗ ಅಕಿ ’for a moment ನಾ ನಿಮ್ಮನ್ನ ಮದ್ವಿ ಆಗಿದ್ದ ಮರತ ಬಿಟ್ಟಿದ್ದೆ’ ಅಂದಾಗ ತಲಿ ಕೆಟ್ಟತ. for a moment ಅಲ್ಲಾ forever ನಾ ಅಕಿನ್ನ ಮದ್ವಿ ಆಗಿದ್ದ ಮರಿಯೋ ಅಷ್ಟ ಸಿಟ್ಟ ಬಂದಿತ್ತ ಖರೆ ಆದರ for a moment ತಡ್ಕೊಂಡೆ.
ಇನ್ನ ಅಕಿ ಏನ ಅಗದಿ ಮನುಸ್ಮೃತಿ ಬಗ್ಗೆ ಉಲ್ಲೇಖ ಮಾಡಿದ್ಲಲಾ ಅದರ ಬಗ್ಗೆ ಹೇಳ್ಬೇಕಂದರ ಇಕಿ ಒಂದ ವಾರದಿಂದ ಪ್ರವಚನ ಕೇಳಲಿಕ್ಕೆ ಹೊಂಟಾಳ. ನಾ ಎಷ್ಟ ಬಡ್ಕೊಂಡೆ
’ನಿಂದ ಇನ್ನೂ ಪ್ರವಚನ ಕೇಳೋ ವಯಸ್ಸಲ್ಲಾ, ನಿಮ್ಮ ಅತ್ತಿನ್ನ ಕಳಸ’ ಅಂತ ಹೇಳಿ. ಆದರ ಏನ ಮಾಡೋದ ನಮ್ಮವ್ವನ ’ಮಿಥುನ ರಾಶಿ, ನಮ್ಮನಿ ಯುವರಾಣಿ’ ಧಾರಾವಾಹಿ ಮುಗಿಯೋ ತನಕ ಟಿ.ವಿ ರಿಮೋಟ್ ಇಕಿಗೆ ಸಿಗಂಗಿಲ್ಲಾ.
ಇನ್ನ ಮನ್ಯಾಗ ಕೂತರ ಏನ ಮಾಡ್ಬೇಕ ಅಂತ ಮಠಕ್ಕ ಹೊಂಟಾಳ. ನಾ ಹೋದರ ಹೋಗ್ಲಿ ತೊಗೊ ಮನಿನರ ಶಾಂತ ಇರ್ತದ ಅಂತ ಸುಮ್ಮನಿದ್ದೆ. ಆದರ ದಿವಸಾ ಅಲ್ಲೇ ಪುರಾಣದಾಗ ಕೇಳ್ಕೊಂಡ ಬಂದ ನನ್ನ ಜೀಂವಾ ತಿನ್ನೋಕಿ.
ನಾ ಅಕಿಗೆ
’ಲೇ..ನೀ ಅಲ್ಲೇ ಕೇಳಿದ್ದನ್ನ ’ಈ ಕಿಂವ್ಯಾಗ ಕೇಳಿ ಆ ಕಿಂವ್ಯಾಗಿಂದ ಬಿಡ’ ಅಂತ ಅನ್ನಲಿಕ್ಕೂ ಬರಂಗಿಲ್ಲಾ. ಪಾಪ, ಆಚಾರ್ಯರ ನೋಡಿದರ ನಮ್ಮ ಮಂದಿ ಸಂಸ್ಕೃತಿ, ಸಂಪ್ರದಾಯ ಮರಿಬಾರದು ಅಂತ ಪ್ರವಚನ ಹೇಳತಿರ್ತಾರ.
ಅಲ್ಲಾ, ಹಂಗ ನಂಗ ಮದ್ವಿ ಒಳಗ ಎಂಟ ಟೈಪ ಅವ ಅಂತನೂ ಗೊತ್ತಿದ್ದಿದ್ದಿಲ್ಲಾ. ಕಡಿಕೆ
’ಪ್ರವಚನ ಕೇಳಲಿಕ್ಕೆ ಹೋದೊಕಿ ನೀನ. ನೀ ಎಂಟ ಟೈಪ ಮದ್ವಿ ಯಾವ ಹೇಳ ನಾ ಅದರಾಗ ನಂಬದ ಯಾವದ ಅಂತ ಹೇಳ್ತೇನಿ?’ ಅಂದೆ. ಅಕಿ ಒಂದ ಹೊಡ್ತಕ್ಕ
ಬ್ರಹ್ಮೋ ದೈವಸ್ತ-ಥೈವಾರ್ಶಃ ಪ್ರಜಾಪತ್ಯಸ್ತಥಾಸುರಃ ಗಂಧರ್ವೋ ರಾಕ್ಷಸಶ್ಚೈವ ಪೈಶಾಚಶ್ಚಾಷ್ಟಮೋಧಮ:
’ ಮನುಸ್ಮೃತಿ ಶ್ಲೋಕ 3.21 ಪ್ರಕಾರ ವಿವಾಹದೊಳಗ ಒಟ್ಟು ಎಂಟು ತರಹದ ವಿವಾಹ ಪದ್ಧತಿಗಳು ಇವೆ. ಬ್ರಹ್ಮ ವಿವಾಹ ಪದ್ಧತಿ, ದೈವ ವಿವಾಹ ಪದ್ದತಿ, ಅರ್ಶ, ಪ್ರಜಾಪತ್ಯ, ಅಸುರ, ಗಂಧರ್ವ, ರಾಕ್ಷಸ ಮತ್ತ ಪೈಶಾಚ ……’ ಅಂತ ಹೇಳಿದ್ಲು.
ಖರೇ ಹೇಳ್ತೆನಿ ಅಕಿ ಬಾಯಾಗ ಸಂಸ್ಕೃತ ಶ್ಲೋಕ ಕೇಳಿ ಒಂದ ಸರತೆ ಒದ್ದಿಲೇ ಧಾಬಳಿ ಉಟಗೊಂಡ ಸಾಷ್ಟಾಂಗ ನಮಸ್ಕಾರ ಮಾಡಬೇಕ ಅನಸ್ತ ಆದರ ತಡಕೊಂಡ
’ಲೇ…ನೀ one by one expain ಮಾಡ್ಕೋತ ಹೇಳ, ಕನ್ನಡದಾಗ ಹೇಳ. ಹಿಂಗ ರಾತ್ರೊ ರಾತ್ರಿ ಶಾಣ್ಯಾಕಿ ಆಗಿ ಸಂಸ್ಕೃತ ಒಳಗ ಹೇಳಿದರ ನಂಗೇನ ತಿಳಿಬೇಕ’ ಅಂದೆ.
ಅಕಿ ಮೊದ್ಲ ಬ್ರಹ್ಮ ವಿವಾಹ ಪದ್ಧತಿ ಬಗ್ಗೆ ಹೇಳ್ಕೋತ –
’ಇದು ಅತ್ಯಂತ ಶ್ರೇಷ್ಟ ವಿವಾಹ ಪದ್ಧತಿಯಾಗಿದ್ದು ಇದರಲ್ಲಿ ವರ ಮತ್ತು ಕನ್ಯೆ ಇಬ್ಬರು ಒಂದೇ ವರ್ಣದವರ ಆಗಿದ್ದು, ವರ ತನ್ನ ಬ್ರಹ್ಮಚರ್ಯವನ್ನ ಮುಗಿಸಿರಬೇಕು ಮತ್ತು ವರನು ತನ್ನ ಶಿಕ್ಷಣ, ವೃತ್ತಿ ಕೌಶಲ್ಯವನ್ನೇಲ್ಲಾ ಕಲಿತಿರಬೇಕು. ಕನ್ಯೆಯ ತಂದೆಯು ವರನ ಜನ್ಮ, ಗೋತ್ರ, ನಡತೆ, ವಿದ್ಯೆ ಎಲ್ಲವನ್ನು ನೋಡಿ ’ ವರನೂ ಯೋಗ್ಯ’ ಅನಿಸಿದರೆ ಅವನೇ ಸ್ವತಃ ವರನನ್ನು ಆಹ್ವಾನಿಸಿ ಕನ್ಯಾದಾನ ಮಾಡಿ ಕೊಡಬೇಕು. ಈ ವಿವಾಹ ಪದ್ಧತಿಯಲ್ಲಿ ವರದಕ್ಷಿಣೆ ಇರುವದಿಲ್ಲ, ಕನ್ಯೆ ಕೇವಲ ಎರೆಡು ಜೊತಿ ಬಟ್ಟೆ ಮತ್ತು ಅಲ್ಪ-ಸ್ವಲ್ಪ ಆಭರಣಗಳೊಂದಿಗೆ ಮದುವೆ ಮಾಡಿಕೊಳ್ಳುತ್ತಾಳೆ’ ಅಂತ ಹೇಳಿದ್ಲು. ಅದನ್ನ ನಾ ಕೇಳಿ ನಾ ದೊಡ್ಡ ಸ್ಟೈಲಾಗಿ
’ಏ. ನೀ ನಂಬದ ಯಾ ಟೈಪ ಅಂತ ಎಷ್ಟ ತಲಿಕೆಡಸಿಕೊಂಡಿ, ಒಂದನೇದ ನಂಬದ, ಶ್ರೇಷ್ಟ ವಿವಾಹ ಪದ್ಧತಿ ಅಂದರ ನಂಬದ ತೊಗೊ?’ ಅಂತ ಅಂದರ
’ಹಾಂ….ಹದಿನೈದ ಸಾವಿರ ವರದಕ್ಷಿಣಿ, ಐದ ತೊಲಿ ಬಂಗಾರ ತೊಗೊಂಡೋರ ಯಾರ? ಮ್ಯಾಲೆ ಕನ್ನಡಿ ನೋಡಿರೇನ ನಿಮ್ಮ ವರ್ಣ ಹೆಂಗ ಅದ ನಂದ ಹೆಂಗ ಅದ?’ ಅಂತ ಅಂದ್ಲು.
ನಾ ವರದಕ್ಷಿಣಿ ಬಗ್ಗೆ ಮಾತಾಡ್ಲಿಕ್ಕೆ ಹೋಗಲಿಲ್ಲಾ, ಬ್ಯಾಚಲರ್ ಪಾರ್ಟಿಗೆ, ಹನಿಮೂನಕ್ಕ ಬೇಕಾಗ್ತದ ಅಂತ ಪೆಟ್ಟಿ ಕ್ಯಾಶ್ ಇಸ್ಗೊಂಡಿದ್ದ ಖರೇ ಇತ್ತ, ಇನ್ನ ಬಂಗಾರ ಏನ ಅದ ಅಲಾ ಅದ ನಮ್ಮ ಮಾವ ತಮ್ಮ ಮಗಳಿಗೆ ಹಾಕಿದ್ದರ ಹೊರತು ನಂಗೇನ ಒಂದ ಗುಂಜಿ ಕೊಟ್ಟಿದ್ದಿಲ್ಲಾ. ಮತ್ತ ಇವತ್ತಿಗೂ ನಾ ಒಂದ ಗುಂಜಿ ಕೇಳಿಲ್ಲಾ. ಇನ್ನೂ ಉಲ್ಟಾ ಕಾಪರ್- ಟಿ ನಾ ನನ್ನ ರೊಕ್ಕದಲೇನ ಮಾಡಿಸಿ ಹಾಕಿಸಿದ್ದೆ.
ಆದರ ಅಕಿ ವರ್ಣದೊಳಗ ಭೇದ ಭಾವ ಮಾಡಿದ್ದ ಕೇಳಿ
’ಲೇ… ವರ್ಣ ಅಂದರ ಏನ ತಿಳ್ಕೊಂಡಿ, ನೀವು ಸ್ಮಾರ್ತರು, ನಾ ವೈಷ್ಣರೊಂವಾ ಅಂತ ತಿಳ್ಕೊಂಡಿ ಏನ?’ ಅಂತ ಕೇಳಿದರ
’ಅಯ್ಯ…ನಾ ವರ್ಣ ಅಂದರ ಬಣ್ಣ ಅಂತ ತಿಳ್ಕೊಂಡಿದ್ದೆ sorry, ಅದಕ್ಕ ಅಂತೇನಿ..ನನ್ನ ಬಣ್ಣ ಎಲ್ಲೇ ನಿಮ್ಮ ಬಣ್ಣ ಎಲ್ಲೆ’ ಅಂತ ಟಾಂಟ್ ಹೊಡದ್ಲು.
’ಹೌದ ತೊಗೊ ನೀ ರೇಶನ್ ಅಕ್ಕಿ ತೊಳದ ನೀರ ಇದ್ದಂಗ ಇದ್ದಿ ನಾ ತಳಕ್ಕ ಹತ್ತಿದ್ದ ಕಟ್ಟಿನ ಸಾರ ಇದ್ದಂಗ ಇದ್ದೇನಿ’ ಅಂತ ಜೋರ ಮಾಡಿದೆ. ಆದರ ಅಕಿ ಏನ ಗಪ್ ಆಗಲಿಲ್ಲಾ, ಫ್ಲ್ಯಾಶ್ ಬ್ಯಾಕಿಗೆ ಹೋಗಿ ಇಮೋಶನಲ್ ಆಗಿ
’ಹಂಗ ನಾ ಬರೇ ಎರಡ ಜೋಡಿ ನೈಟಿ ತಂದಿದ್ದರು ಎರಡ ಟ್ರಂಕ್ ರೇಶ್ಮಿ ಸೀರಿ ತೊಗೊಂಡ ಬಂದಿದ್ದೆ’ ಅಂದ್ಲು. ಏನೋ ನನ್ನ ಪುಣ್ಯಾ ಅದರ ಜೊತಿ ತಂದ ಮ್ಯಾಚಿಂಗ್ ಪರಕಾರ, ಬ್ಲೌಸ್ ಹೇಳಲಿಲ್ಲಾ.
ಅಕಿ ಅಷ್ಟಕ್ಕ ಮುಗಸಲಿಲ್ಲಾ
’ನಮ್ಮಪ್ಪ ಗೋತ್ರ ಬಿಟ್ಟದ, ಕುಂಡ್ಲಿ ಕೂಡೇದ ಅಂತ ಹುಡಗನ ನಡತೆ, ಯೋಗ್ಯತೆ ಏನ ಸುಡಗಾಡ ನೋಡಲಾರದ ನನ್ನ ನಿಮಗ ಕಟ್ಟಿ ತಪ್ಪ ಮಾಡಿದಾ’ ಅಂತ ಕಂಟಿನ್ಯು ಮಾಡಿದ್ಲು.
ನಾನು ಸಿಟ್ಟಿಗೆದ್ದ
’ಹೌದ ನಿಮ್ಮಪ್ಪ ಮಾಡಿದ್ದ ತಪ್ಪಿಗೆ ಈಗ ನಾ ಅನುಭವಸಲಿಕತ್ತೇನಿ.ನಿಮ್ಮಪ್ಪಗ ಕುಂಡ್ಲಿ ಕೊಡಬೇಕಾರ ತಿಳಿಲಿಲ್ಲೇನ? ನಮಗೂ ಕನ್ಯಾ ಸರ್ವಗುಣ, ಸಕಲ ಕಲಾ ವಲ್ಲಭಿ ಅಂತೇಲ್ಲಾ ಏನೇನೊ ಹೇಳಿದ್ದರ ತೊಗೊ ನಿಂಗ ನೋಡಿದರ ದಾಲಕಿಚಡಿ, ಬಿಸಿಬ್ಯಾಳಿ ಭಾತದ ಡಿಫರೆನ್ಸ ಗೊತ್ತಿಲ್ಲಾ’ ಅಂತ ನಾ ಶುರು ಹಚಗೊಂಡೆ.
ನಾವ ಮಾತೋಡದನ್ನೇಲ್ಲಾ ಟಿ.ವಿ.ಮ್ಯೂಟ ಮಾಡಿ ’ಮಂಗಳಗೌರಿ ಮದ್ವಿ’ ನೋಡ್ಲಿಕತ್ತಿದ್ದ ನಮ್ಮವ್ವಗ ತಲಿ ಕೆಟ್ಟತ
’ಏ..ಲಗ್ನ ಆಗಿ ಇಪ್ಪತ್ತ ವರ್ಷ ಆತ ಅದ ಏನ non-essential ಟಾಪಿಕ್ ಮ್ಯಾಲೆ ಜಗಳಾಡ್ತೀರಿ. ಯಾ ಟೈಪ ಮ್ಯಾರೇಜ ಅನ್ನೋದನ್ನ ತೊಗೊಂಡ ಈಗ ಏನ ಮಾಡೋರ ಸುಡಗಾಡ, ಒಟ್ಟ ಇಬ್ಬರದು ಲಗ್ನ ಆಗೇದಿಲ್ಲ, ಈಗ ಸುಮ್ಮನ ಬಾಯಿಮುಚಗೊಂಡ ಕೂಡ್ರಿ’ ಅಂತ ಜೋರ ಮಾಡಿದ್ಲು.
ನಮ್ಮವ್ವ ಹೇಳಿದ್ದ ನಂಗು ಖರೆ ಅನಸ್ತ.
ನಾ ಮುಂದ ಉಳದ ಏಳ ಟೈಪ ಮದ್ವಿ ಡಿಟೇಲ್ಸ್ ಕೇಳಲಿಕ್ಕ ಹೋಗಲಿಲ್ಲಾ. ಒಂದನೇದ ಕೇಳಿನ ಇಷ್ಟ ಇಬ್ಬರ ನಡುವೆ ವಿರಹ ಆತ ಇನ್ನ ಎಂಟೂ ಟೈಪ್ ವರಿಗೆ ಹಚಗೋತ ಹೋದರ ಮುಗದ ಹೋತ ಅಂತ ಸುಮ್ಮನಾದೆ. ಅಲ್ಲಾ ಒಂದ ಅಂತೂ ಖರೆ, ನಂದ ಯಾ ಟೈಪ್ ಮದ್ವಿ ಅನ್ನೋದ ಗ್ಯಾರಂಟಿ ಇಲ್ಲಾಂದರು ಅಕಿದ ಮಾತ್ರ ಅಸುರ ಇಲ್ಲಾ ರಾಕ್ಷಸ ಟೈಪ ಮದ್ವಿ ಅಂತ ಅನಸಲಿಕತ್ತದ.
ಹಂಗ ವಿವಾಹದಾಗ ಎಂಟ ಟೈಪ ಇರಬಹುದು, ಯಾ ಟೈಪರ ವಿವಾಹ ಆಗಿರಬಹುದು ಆದರ ಮುಂದ ಸಂಸಾರದಾಗ ನೂರಾ ಎಂಟ ವಿರಹ ಇರೋದ-ಬರೋದ ಗ್ಯಾರಂಟಿ. ಅದಕ್ಕ ಮತ್ತ ಸಂಸಾರ ಅನ್ನೋದ?
ಈಗ ನನ್ನ ನೋಡ್ರಿ, ನಾಳಿಗೆ ನನ್ನ ಮದ್ವಿ ಆಗಿ ಇಪ್ಪತ್ತೊಂದ ವರ್ಷ ಆತ, ಒಂಚೂರರ regret ಮಾಡ್ತೇನ ಏನ್?
’ನಗು-ನಗುತಾ ನಲಿ..ನಲಿ ಏನೇ ಆಗಲಿ……ಏಲ್ಲಾ ಆ ದೇವನ ಕಲೆಯಂದೇ ನೀ ತಿಳಿ’ ಅಂತ ಸುಮ್ಮನ ಬಾಯಿ ಮುಚಗೊಂಡ ಸಂಸಾರಿಕ ಅನುಭವ ಬರಕೋತ ನಿಮ್ಮ ಜೊತಿ ಹಂಚಗೋತ ಹೊಂಟೇನಿ.

Leave a Reply

Your email address will not be published. Required fields are marked *

About Me

ಹುಟ್ಟಿದ್ದು 1973, ಅಕ್ಟೋಬರ 13ಕ್ಕ. ಹೆಸರಿಗೆ ಹುಟ್ಟಿದ್ದ ಶಿವಮೊಗ್ಗಾ ಆದರು, ಬೆಳದಿದ್ದು-ಬಲತಿದ್ದು-ಕಲತಿದ್ದು- ಕಳತಿದ್ದು (ಪಕ್ವವಾಗಿದ್ದು) ಎಲ್ಲಾ ಹುಬ್ಬಳ್ಳಿ ಒಳಗ, ಕಲತಿದ್ದು ಬಿ.ಏಸ್ಸಿ, ಕೋತಂಬರಿ ಕಾಲೇಜ ಹುಬ್ಬಳ್ಳಿ ಒಳಗ ಮುಂದ ಎಮ್.ಬಿ.ಎ (ಸಿಂಬಾಯ್ಸಿಸ್- ಪೂಣೆ). ಸದ್ಯೇಕ...

Follow me on Facebook

ನನ್ನ ಸಂಪೂರ್ಣ ಪ್ರೊಫೈಲ್ ವೀಕ್ಷಿಸಿ