ಒಂದ ’ವರ್ಕ್ ಫ್ರಾಮ್ ಹೋಮ್’ ವರಾ ಇದ್ದರ ನೋಡ್ರಿ……

ಮೊನ್ನೆ ನಮ್ಮ ತಿಳವಳ್ಳಿ ಮಾಮಿ ಫೋನ ಮಾಡಿದ್ಲು. ಹಂಗ ಅಕಿ ಇತ್ತೀಚಿಗೆ ಭಾಳ ಫೋನ ಮಾಡ್ಲಿಕತ್ತಾಳ. ಅದಕ್ಕ ಕಾರಣ ಏನಪಾ ಅಂದರ ಅಕಿ ಮಗಳ ಒಬ್ಬೋಕಿ ಕನ್ಯಾ ಇದ್ದಾಳ. ಅಗದಿ ಸರ್ವಗುಣ ಸಂಪನ್ನಿ, ಎದರಾಗೂ ತಗಿಯೊಹಂಗಿಲ್ಲಾ, ಆರಸೋಹಂಗಿಲ್ಲಾ. ಮರದಾಗ ಒಂದ ಸರತೆ ಕೇರಿ ಸೀದಾ ಉಡಿ ತುಂಬಿಸಿಗೊಳೊ ಕನ್ಯಾ. ಸಾಫ್ಟವೇರ ಭಾಷಾದಾಗ ಹೇಳ್ಬೇಕಂದರ ಡೈರೆಕ್ಟ ಕಟ್ & ಪೇಸ್ಟ ಮಾಡ್ಕೊಳೊ ಕನ್ಯಾ ಅನ್ನರಿ.
ಇನ್ನ ನಮ್ಮ ಬಳಗದಾಗ ವರಕ್ಕ ಏನ ಬರಾ ಇಲ್ಲಾ. ನಿನ್ನೆ ಬಿದ್ದ ಮಳಿಗೆ ಇವತ್ತ ಹುಟ್ಟಿದ ನಾಯಿ ಕೊಡಿ ಗತೆ ಕಾಲ ಕಾಲಗೊಂದ ಬೆಳದ ಬಲತ ನಿಂತಾವ ಖರೆ ಆದರ ಯಾರೂ ನಮ್ಮ ಮಾಮಿಗೆ ನಿನ್ನ ಮಗಳನ ಕೊಡ್ತಿ ಏನ ಅಂತ ಕೇಳಲಿಕ್ಕೆ ರೆಡಿ ಇಲ್ಲಾ. ಯಾಕಂದರ ಅಕಿ ತನ್ನ ಮಗಳ ಕುಂಡ್ಲಿ ಕೆಳಗ
’only those who work from home can apply’ ಅಂತ ಬರದಾಳ.
ಅಂದರ ಅಕಿ ’ನನ್ನ ಮಗಳಿಗೆ ಒಂದ work from home ವರಾ ನೋಡ್ರಿ’ ಅಂತ ಅಗದಿ ಭಿಡೆ ಬಿಟ್ಟ ಹೇಳ್ಯಾಳ.
ಹಂಗ ಅಕಿ ಹೇಳಿದ್ದೇನೋ work from home ವರಾ ಖರೆ ಆದರ ಅದ ಮುಂದ ಅಕಿ ಮಗಳನ ಕಟಗೊಂಡ ಮ್ಯಾಲೆ work for home ವರಾ ಆದಂಗ ಆ ಮಾತ ಬ್ಯಾರೆ.
ಅಲ್ಲಾ ಎಲ್ಲಾ ಗಂಡಂದರು ಮನ್ಯಾಗ ಕೆಲಸಾ ಮಾಡೆ ಮಾಡ್ತಾರ. ಈಗ ನಾ ಮಾಡಂಗಿಲ್ಲಾ. ಮ್ಯಾಲೆ ಕಟಗೊಂಡ ಹೆಂಡ್ತಿ ಮನಿ ಕೆಲಸಾ ಮಾಡಲಾರದ ಮತ್ತ್ಯಾರ ಮನಿ ಕೆಲಸ ಮಾಡ್ಬೇಕ್ರಿ? ಆದರ ಗಂಡಂದರಿಗೂ ಆಸರಕಿ ಬ್ಯಾಸರಕಿ ಇರ್ತದ ಅಂತ ಒಂದ ಎಂಟ ತಾಸ ಹೊರಗ ದುಡಿಲಿಕ್ಕೂ ಹೋಗ್ತಿರ್ತೇವಿ ಅನ್ನರಿ. ಇನ್ನ ಹಂತಾದರಾಗ ಆಫಿಸಿಯಲ್ ಡ್ಯೂಟಿನೂ work from home ಇತ್ತಂದರ he can work extra for home ಅಂತ ನಮ್ಮ ಮಾಮಿ ವಿಚಾರ. ಆದರ ಅಕಿ ಮಂದಿ ಮುಂದ ಹೆಂಗ ಹೇಳ್ತಾಳ ಅಂದರ
’ಏ, ನಂಗೇನ ಸಾಫ್ಟವೇರ ವರಾ ಬೇಕು, ಫಾರೇನ್ನಾಗ ಇರಬೇಕು ಅಂತೇನಿಲ್ಲಾ ಆದರ ಹುಡುಗಗ ವರ್ಷದಾಗ ಮೂರ ತಿಂಗಳರ work from home facility ಇರಬೇಕು’ ಅಂತ ಅನ್ನೋಕಿ. ಅಲ್ಲಾ ಹಂಗ ಈ ವರ್ಕ್ ಫ್ರಾಮ್ ಹೋಮ್ ಕನ್ಸೆಪ್ಟ ಇರೋದ ಸಾಫ್ಟವೇರ್ ಇಂಡಸ್ಟ್ರಿ ಒಳಗ ಅನ್ನೋದು ಅಕಿಗೆ ಗೊತ್ತಿದ್ದದ್ದಕ್ಕ ಅಕಿ ಹಂತಾ ವರಾನ ಬೇಕಂತ ಅನ್ನಲಿಕತ್ತಾಳ.
ಹಂಗ ನಮ್ಮ ಮಾಮಿಗೆ work from home ವರಗೊಳ ಬಗ್ಗೆ ಗೊತ್ತಾಗಿದ್ದ ಅವರಕ್ಕನಿಂದ. ಇಲ್ಲಾಂದರ ಅಲ್ಲಿ ತನಕಾ ಅಕಿಗೆ ತನ್ನ working homely husband ಬಿಟ್ಟರ ಬ್ಯಾರೆ ಗೊತ್ತಿರಲಿಲ್ಲಾ. ಆದರ ಅವರಕ್ಕನ ಅಳಿಯಾ ಒಬ್ಬೊಂವಾ ಅವನ ಹೆಂಡ್ತಿ ಒಂದನೇದ ಹಡಿಬೇಕಾರ ಮ್ಯಾಟರ್ನಿಟಿ ಕಮ್ ಪ್ಯಾಟರ್ನಿಟಿ ಲೀವ ತೊಗೊಂಡ ಬಾಣಂತನ ಮಾಡ್ಲಿಕ್ಕೆ ಬಂದಂವಾ ಮಗನ ಜವಳದ ತನಕ ಆಫೀಸ ಕಡೆ ತಲಿ ಹಾಕಲಿಲ್ಲಾ. ಆವಾಗ ನಮ್ಮ ಮಾಮಿಗೆ ಈ work from home concept ಗೊತ್ತಾಗಿದ್ದ. ಅಂವಾ ಹಂಗ ವರ್ಷಾನಗಟ್ಟಲೇ ಹೆಂಡ್ತಿ ಮನ್ಯಾಗ ಇರೋದ ನೋಡಿ ನಾವೇಲ್ಲಾ ಮೊದ್ಲ ಅವನ್ನ ನೌಕರಿ ಇಂದ ತಗದಿರಬೇಕ ಅಂತ ತಿಳ್ಕೊಂಡಿದ್ವಿ.
ಅಲ್ಲಾ ಹಂಗ ಅಂವಾ ಈಗೂ ಯಾವಗ ಬೇಕ ಆವಾಗ ವರ್ಕ ಫ್ರಾಮ್ ಹೋಮ್ ಮಾಡಲಿಕತ್ತಾನ. ಯಾವದ ಫಂಕ್ಶನಗೆ ಕರೀರಿ ಒಂದ ವಾರ ಮೊದ್ಲ ಹಾಜರಿದ್ದ, ಫಂಕ್ಶನ ಮುಗದ ಒಂದ ವಾರ ತನಕ ಇದ್ದ ಕಡಿಕೆ ಇನ್ನೇನ ನಾವ ತಲಿಕೆಟ್ಟ ನೀ ದಾಟ ಅಂತ ಹೇಳ್ಬೇಕು ಅನ್ನೋದರಾಗ ಸೂಕ್ಷ್ಮ ತಿಳ್ಕೊಂಡ ಜಾಗಾ ಖಾಲಿ ಮಾಡ್ತಾನ.
’ಅಲ್ಲಾ, ಹಂಗೇನರ ಮತ್ತ ಕೆಲಸ ಇದ್ದರ ಹೇಳ್ರಿ…. ಭಿಡೇ ಮಾಡ್ಕೋ ಬ್ಯಾಡ್ರಿ..ನಂದ ಹೆಂಗಿದ್ದರೂ ವರ್ಕ್ ಫ್ರಾಮ್ ಹೋಮ್, ನಮ್ಮ ಮನ್ಯಾಗ ಇದ್ದರು ಅಷ್ಟ ನಿಮ್ಮ ಮನ್ಯಾಗ ಇದ್ದರು ಅಷ್ಟ’ ಅಂತಾನ.
ಯಾವಾಗ ಅಳಿಯಾಂದ ಹಿಂತಾ ನೌಕರಿ ಅಂತ ಗೊತ್ತಾತಲಾ ಅವರತ್ತಿ ಭಡಾ ಭಡಾ ಇದ್ದ ಇನ್ನೊಬ್ಬ ಮಗಳದ್ದು ಲಗ್ನಾ ಮಾಡಿ ಕಡಿಕೆ ವರ್ಷ ತುಂಬೋದರಾಗ ಅಕಿದು ಬಾಣಂತನ ಅವನ ಕಡೆ ಮಾಡಿಸೇ ಬಿಟ್ಟಳು. ಹೆಂಗಿದ್ದರು ಒಂದನೇ ಅಳಿಯಾ ವರ್ಕ ಫ್ರಾಮ್ ಹೋಮ, ಬಾಣಂತನಕ್ಕ ಹೆಲ್ಪ ಆಗ್ತಾನ ಅಂತ ಅಕಿಗೆ ಧೈರ್ಯಾ ಇತ್ತ ಅನ್ನರಿ. ತನ್ನ ಹೆಂಡತಿ ಒಂದನೇ ಡಿಲೇವರಿಗೆ ಬಂದಂವಾ, ಅಕಿದ ಬಾಣಂತನ ಮಾಡಿ, ಮಗಂದ ಜವಳಾ ಮಾಡಿ, ಕಡಿಕೆ ಹೆಂಡ್ತಿ ತಂಗಿದ ಲಗ್ನಾ ಮಾಡಿ ಅಕಿದ ಬಾಣಂತನ ಮುಗಿಸಿದಾ ಅಂದರ ಖರೇನ ದೇವರ ಹಂತಾ ಅಳಿಯಾ ಬಿಡ್ರಿ.
ಅವರತ್ತಿ ಅಂತೂ ಹಿಂತಾ ಅಳಿಯಂದರ ಜಗತ್ತಿನಾಗ ಇರ್ತಾರ ಅಂದರ ಹತ್ತ ಹೆಣ್ಣ ಹಡಿಬಹುದು ಅಂತ ಅನ್ನೋಕಿ. ಅಲ್ಲಾ, ಪಾಪ ಹಂಗ ಹುಡಗ ಕೈಕಾಲಾಗ ಭಾಳ ಹೆಲ್ಪ್ ಆಗ್ತದ ಬಿಡ್ರಿ ಯಾಕ ಸುಳ್ಳ ಹೇಳ್ಬೇಕ. ಹಿಂಗ ವರ್ಕ್ ಫ್ರಾಮ್ ಹೋಮ ಮಾಡೋ ಗಂಡ ಸಿಗಬೇಕಂದರು ಹೆಂಡ್ತಿ ಕಾಲ್ಗುಣಾ ಛಲೋ ಇರಬೇಕ. ಎಲ್ಲಾದಕ್ಕೂ ಹೆಂಡಂದರ ಪಡದ ಬರಬೇಕ ತೊಗೊರಿ.
ಇನ್ನ ನಮ್ಮ ಹೆಣೇಬರಹದಾಗ ಅಂತೂ work for home and office ಎರಡೂ ಬರದದ ಅನುಭವಸಲಿಕತ್ತೇವಿ. ನಾವ ನೋಡಿದರ ಯಾವಾಗ ಹೆಂಡ್ತಿ ಮಕ್ಕಳ ಕಾಟಾ ತಪ್ಪಿಸಿಗೊಂಡ ಕೆಲಸಕ್ಕ ಹೋಗೇವೊ ಅಂತಿರ್ತೇವಿ ಹಂತಾದರಾಗ ಇಂವಾ ಮನ್ಯಾಗ ಮನಿ ಕೆಲಸ, ಆಫೀಸ ಕೆಲಸಾ ಎಲ್ಲಾ ಮಾಡ್ತಾನ ಅಂದರ ಗ್ರೇಟ ಬಿಡ್ರಿ.
ಹೆಂಡ್ತಿ ’ಗ್ಯಾಸ ಮ್ಯಾಲೆ ಹಾಲ ಇಟ್ಟೇನಿ, ಸ್ವಲ್ಪ ಲಕ್ಷ ಇರಲಿ, ಬರೇ ಲ್ಯಾಪ ಟಾಪ್ ಹಿಡ್ಕೊಂಡ ಕೂಡಬ್ಯಾಡ್ರಿ’ ಅಂತ ಅಂದರ…
ಇಲ್ಲಾ ’ರ್ರಿ.. ಬಿಗ್ ಬಜಾರದಾಗ ಡಿಸ್ಕೌಂಟ ಸೇಲ ಬಂದದ ಹೋಗಿ ಬರ್ತೇನಿ ನೀವ ಒಂದ ಸ್ವಲ್ಪ ಹಿಂಡಿದ್ದ ಅರಬಿ ಒಣಾ ಹಾಕರಿ’ ಅಂತ ಅನ್ನೋದರಿಂದ ಹಿಡದ
’ನಾ ಭಾಂಡೆ ತಿಕ್ಕಿ ತೊಳದ ಕೊಡ್ತೇನಿ ನೀವ ಗಲಬರಿಸಿ ಡಬ್ ಹಾಕರಿ’ ಅಂತ ಅಂದರು ಈ ವರ್ಕ ಫ್ರಾಮ್ ಹೋಮ ಗಂಡಾ ರೆಡಿನ ಇರ್ತಾನ.
ಅಲ್ಲಾ ಒಮ್ಮೆ ದೊಡ್ಡಿಸ್ತನ ಬಡದ ನಾ ಮನಿಯಿಂದ ಕೆಲಸಾ ಮಾಡ್ತೇನಿ ಅಂತ ಹೆಂಡ್ತಿ ನೈಟಿ ಫಾಲ್ಸ್ ಹಿಡ್ಕೊಂಡ ಅಡ್ಡಾಡಿದಕ್ಕ ಅನಭವಸಬೇಕ ಇಷ್ಟ.
ಹಿಂಗ ಯಾವಾಗ ಹಿಂತಾ ಅಳಿಯಂದರ ಸಿಗ್ತಾರ ಅಂತ ನಮ್ಮ ಮಾಮಿಗೆ ಗೊತ್ತಾತಲಾ ಆವಾಗಿಂದ ನಮ್ಮ ಮಾಮಿ ತನ್ನ ಮಗಳಿಗೆ ಹಂತಾದ ವರಾ ನೋಡ್ರಿ ಅಂತ ಗಂಟ ಬಿದ್ದಾಳ.
ಅಲ್ಲಾ, ಎಲ್ಲಾ ಬಿಟ್ಟ ನಮ್ಮ ಮಾಮಿ ’ವರ್ಕ್ ಫ್ರಾಮ್ ಹೋಮ್ ವರಾ’ ಯಾಕ ನೆನಪಾತ ಅಂದರ ಈಗ ಆ ಸುಡಗಾಡ ಕೊರೋನಾ ವೈರಸ್ ಸಂಬಂಧ ನಾವೇಲ್ಲಾ ಹತ್ತ ದಿವಸದಿಂದ ವರ್ಕ್ ಫ್ರಾಮ್ ಹೋಮ್ ಮಾಡ್ಲಿಕತ್ತೇವಿ. ಅಂದರ ಮನಿ ಕೆಲಸ, ಮಡದಿ ಕೆಲಸಾ ಮ್ಯಾಲೆ ಟೈಮ ಸಿಕ್ಕರ ಇಷ್ಟ ಪಗಾರ ಕೊಡೊ ಮಾಲಕರ ಕೆಲಸಾ. ಅದಕ್ಕ ನಿನ್ನೆ ನಮ್ಮ ಮಾಮಿಗೆ ಫೋನ ಮಾಡಿ ’ಈಗ ಎಲ್ಲಾ ವರಾನೂ ವರ್ಕ್ ಫ್ರಾಮ್ ಹೋಮ್ ಅವ, ಭಡಕ್ಕನ ಆನಲೈನ್ ಒಳಗ ಒಂದ ವರಕ್ಕ ನಿನ್ನ ಮಗಳನ್ನ ಕಟ್ಟ…’ ಅಂತ ಹೇಳೇನಿ.
ಅನ್ನಂಗ ಈ ಕೊರೋನಾ ಅಂದ ಕೂಡಲೇ ನೆನಪಾತ, ಮೊನ್ನೆ ನಾ ನೆಲಾ ಒರಸಬೇಕಾರ ಕಾಲ ಮ್ಯಾಲೆ ಮಾಡ್ಕೊಂಡ ದಿವಾನ ಮ್ಯಾಲೆ tv ನೋಡ್ಕೊತ ಕೂತ ನನ್ನ ಹೆಂಡತಿ ಒಮ್ಮಿಂದೊಮ್ಮಿಲೆ ’ರ್ರೀ…ಪ್ಯಾಂಡೆಮಿಕ್ ಅಂದರ ಏನ್ರಿ…ನಾ ಎಪಿಡೆಮಿಕ ಇಷ್ಟ ಕೇಳಿದ್ದೆ?’ ಅಂತ ಕೇಳಿದ್ಲು.
ಇನ್ನ ಅಕಿಗೆ ಸರಳ ತಿಳಿಲಿ ಅಂತ ’girl friend, lover ಇವೇಲ್ಲಾ ಎಪಿಡೆಮಿಕ, ಸಾಂಕ್ರಾಮಿಕ ಇದ್ದಂಗ ಆದರ ಹೆಂಡ್ತಿ ಅನ್ನೋಕಿ ಪ್ಯಾಂಡೆಮಿಕ್ ಅಂದರ ಸರ್ವವ್ಯಾಪಿ…..ಜಗತ್ತಿನಾಗ ಎಲ್ಲಾರೂ ಸಫರ್ ಆಗೋ ಹಂತಾ ವೈರಸ್’ ಅಂತ ಹೇಳಿ ಕಡಿಕೆ ಅಕಿ ಕಡೆ
’ಭಾಳ ಶಾಣ್ಯಾರ ಇದ್ದೀರಿ ತೊಗೊರಿ…ನಿಮ್ಮ ಅಕೆಡೆಮಿಕ ಇರೋದ ಇಷ್ಟ…..ಇನ್ನು ಹತ್ತ ದಿವಸ ಮನ್ಯಾಗ ಇರಬೇಕ ಅಂತಿರೋ ಇಲ್ಲೋ’ ಅಂತ ತಿವಿಸ್ಗೊಂಡೆ.
ಇರಲಿ… ನೋಡ್ರಿ ನಿಮ್ಮ ಪೈಕಿ ಯಾವದರ ಛಲೋ ವರಾ ಇದ್ದರ ಹೇಳ್ರಿ. ಆದರ ಒಂದ ಕಂಡಿಶನ್, ವರಾ ಮಾತ್ರ ’work from home’ ಇರಬೇಕ ಮತ್ತ.
ಹಂಗ ಮುಂದ ಮದ್ವಿ ಆದ ಮ್ಯಾಲೆ ಆ ಹುಡುಗಿ ಅವಂಗ ನಮ್ಮಂಗ life long quarentine ಮಾಡೇ ಮಾಡ್ತಾಳ ಆ ಮಾತ ಬ್ಯಾರೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

About Me

ಹುಟ್ಟಿದ್ದು 1973, ಅಕ್ಟೋಬರ 13ಕ್ಕ. ಹೆಸರಿಗೆ ಹುಟ್ಟಿದ್ದ ಶಿವಮೊಗ್ಗಾ ಆದರು, ಬೆಳದಿದ್ದು-ಬಲತಿದ್ದು-ಕಲತಿದ್ದು- ಕಳತಿದ್ದು (ಪಕ್ವವಾಗಿದ್ದು) ಎಲ್ಲಾ ಹುಬ್ಬಳ್ಳಿ ಒಳಗ, ಕಲತಿದ್ದು ಬಿ.ಏಸ್ಸಿ, ಕೋತಂಬರಿ ಕಾಲೇಜ ಹುಬ್ಬಳ್ಳಿ ಒಳಗ ಮುಂದ ಎಮ್.ಬಿ.ಎ (ಸಿಂಬಾಯ್ಸಿಸ್- ಪೂಣೆ). ಸದ್ಯೇಕ...

Follow me on Facebook

ನನ್ನ ಸಂಪೂರ್ಣ ಪ್ರೊಫೈಲ್ ವೀಕ್ಷಿಸಿ